ನ್ಯೂಸ್

ಬಾಹುಬಲಿ ನಟ ದುಗ್ಗುಬಾಟಿ ವೈವಾಹಿಕ ಜೀವನದಲ್ಲಿ ಬಿರುಗಾಳಿ? ಎಲ್ಲಾ ಫೋಟೋ ಡಿಲೀಟ್​- ಪತ್ನಿ ಹೇಳಿದ್ದೇನು?

ಹೈದರಾಬಾದ್​: ತೆಲುಗುವಿನ ಖ್ಯಾತ ನಟ ಬಲ್ಲಾಳದೇವ ರಾಣಾದಗ್ಗುಬಾಟಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿನ ಎಲ್ಲಾ ಫೋಟೋಗಳನ್ನೂ ಏಕಾಏಕಿ ಡಿಲೀಟ್​ ಮಾಡಿದ್ದಾರೆ. ಬೇರೆ ಫೋಟೋಗಳನ್ನು ಡಿಲೀಟ್​ ಮಾಡಿದರೆ ಇಷ್ಟು ಸುದ್ದಿಯಾಗುತ್ತಿರಲಿಲ್ಲವೇನೋ. ಆದರೆ ಪತ್ನಿ ಮಿಹಿಕಾ ಬಜಾಜ್ ಜತೆಗಿರುವ ಸುಂದರ ಕ್ಷಣಗಳ ಫೋಟೋಗಳನ್ನೂ ಡಿಲೀಟ್​ ಮಾಡಿರುವುದರಿಂದ ಇವರ ಸಾಂಸಾರಿಕ ಜೀವನದಲ್ಲಿ ಬಿರುಕು ಉಂಟಾಗಿದೆಯೇ ಎಂಬ ಪ್ರಶ್ನೆಗಳನ್ನು ಅಭಿಮಾನಿಗಳು ಕೇಳತೊಡಗಿದ್ದರು. ಈ ಸುದ್ದಿ ಭಾರಿ ವೈರಲ್​ ಆಗಿತ್ತು.

ಅಷ್ಟಕ್ಕೂ ನಿನ್ನೆ (ಆಗಸ್ಟ್​ 8) ಇವರ ವಿವಾಹದ ಎರಡನೇ ವಾರ್ಷಿಕೋತ್ಸವ. ಅಂದು ಪತ್ನಿಯ ಜತೆಗೆ ವಿವಾಹ ವಾರ್ಷಿಕೋತ್ಸವದ ಫೋಟೋ ಹಾಕಿಕೊಳ್ಳುತ್ತಾರೆ, ಅದನ್ನು ನೋಡಬೇಕು ಎಂದು ಅಭಿಮಾನಿಗಳು ಕಾತರದಿಂದ ಕಾದಿದ್ದರೆ ಅವರಿಗೆ ಶಾಕ್​ ಆಗುವಂತೆ ಇರುವ ಫೋಟೋಗಳನ್ನೂ ದುಗ್ಗುಬಾಟಿ ಡಿಲೀಟ್​ ಮಾಡಿದ್ದೇ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಜತೆಗೆ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ವರ್ಕ್​ ಇನ್​ ಪ್ರೋಗ್ರೆಸ್​ ಎಂದು ಬರೆದುಕೊಂಡಿರುವುದು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯದಲ್ಲಿ ಯಾವುದು ಸರಿ ಇಲ್ಲ ಎನ್ನುವುದು ಸಾಮಾಜಿಕ ಜಾಲತಾಣದ ಮೂಲಕವೇ ಬಹಿರಂಗವಾಗಿದ್ದು. ಹಾಗಾಗಿ ರಾಣಾ ವಿಚಾರದಲ್ಲಿಯೂ ಬ್ರೇಕಪ್ ಸುದ್ದಿ ಬಲವಾಗಲು ಕಾರಣವಾಗಿದ್ದು ಇದೇ ಸಾಮಾಜಿಕ ಮಾಧ್ಯಮ.

ಆದರೆ ಇದೀಗ, ಅಭಿಮಾನಿಗಳು ಹಾಗೂ ಕಮೆಂಟಿಗರ ಪ್ರಶ್ನೆಗಳಿಗೆ ಇನ್​ಸ್ಟಾಗ್ರಾಂ ಮೂಲಕವೇ ಉತ್ತರ ಕೊಟ್ಟಿದ್ದಾರೆ ಪತ್ನಿ ಮಿಹಿಕಾ. ಇಷ್ಟೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದರೂ ನಟ ಬಲ್ಲಾಳದೇವ ರಾಣಾದಗ್ಗುಬಾಟಿ ಮಾತ್ರ ಏನನ್ನೂ ಬಾಯಿ ಬಿಟ್ಟಿರಲಿಲ್ಲ. ಆದರೆ ಮಿಹಿಕಾ ಮಾತ್ರ ಪತಿ ಜೊತೆಗಿರುವ ರೊಮ್ಯಾಂಟಿಕ್ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ.

ಈ ಮೂಲಕ ತಮ್ಮ ನಡುವೆ ಎಲ್ಲವೂ ಸರಿಯಾಗಿದೆ ಎಂದು ಉತ್ತರಿಸಿದ್ದಾರೆ. ಈ ಫೋಟೋಗಳಿಗೆ ಯಾವುದೇ ಕ್ಯಾಪ್ಷನ್​ ನೀಡದೇ ಹೋದರೂ ಇಬ್ಬರಲ್ಲಿಯೂ ಯಾವುದೇ ರೀತಿಯ ಬಿರುಕು ಇಲ್ಲ ಎನ್ನುವುದನ್ನು ಹೀಗೆ ಹೇಳಿದ್ದು, ಅಭಿಮಾನಿಗಳಲ್ಲಿ ಸಮಾಧಾನ ಮೂಡಿಸಿದೆ. (ಏಜೆನ್ಸೀಸ್​)