ಥಾಣೆ ( ಮಹಾರಾಷ್ಟ್ರ): ಗಾಂಧಿಯ ಹತ್ಯೆಯ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಪುನಃ ಕೋರ್ಟ್ ಮೊರೆ ಹೋಗಿದ್ದಾರೆ. ವಿಚಾರಣೆ ವೇಳೆ ಅವರು ಖುದ್ದು ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ತಮಗೆ ಇದರಿಂದ ಮುಕ್ತಿ ಕೊಡಬೇಕು ಎಂದು ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಥಾಣೆಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ಕೋರ್ಟ್ನಲ್ಲಿ ನಡೆಯುತ್ತಿರುವ ಈ ಕೇಸ್ಗೆ ಸಂಬಂಧಿಸಿದಂತೆ ಕೋರ್ಟ್ಗೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ಕೂಡ ಅನೇಕ ಬಾರಿ ಇದೇ ಮನವಿಯನ್ನು ಮಾಡಿಕೊಂಡು ವಿನಾಯಿತಿ ಪಡೆದುಕೊಂಡಿರುವ ರಾಹುಲ್ ಗಾಂಧಿ, ಇದೀಗ ಶಾಶ್ವತ ವಿನಾಯಿತಿ ನೀಡುವಂತೆ ಕೋರಿದ್ದಾರೆ.
ನಾನು ಸಂಸದ. ತಮ್ಮ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡಬೇಕಾಗುತ್ತದೆ, ಜನರ ಕಷ್ಟ ಆಲಿಸಬೇಕಾಗುತ್ತದೆ, ಅಷ್ಟೇ ಅಲ್ಲದೇ ಪಕ್ಷದ ಕೆಲಸಕ್ಕೆ ಹಾಜರಾಗಬೇಕಿರುತ್ತದೆ. ಆದ್ದರಿಂದ ಸದಾ ಬಿಜಿಯಾಗಿರುತ್ತೇನೆ. ಕೋರ್ಟ್ಗೆ ಪದೇ ಪದೇ ಬರುವುದು ಕಷ್ಟವಾಗುವ ಹಿನ್ನೆಲೆಯಲ್ಲಿ ಶಾಶ್ವತ ವಿನಾಯಿತಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಗಾಂಧಿಯ ಹತ್ಯೆಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕೈವಾಡವಿದೆ ಎಂದು 2014 ರಲ್ಲಿ ಥಾಣೆಯ ಭಿವಂಡಿ ಟೌನ್‌ಶಿಪ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದು ಅದರ ವಿಚಾರಣೆ ನಡೆಯುತ್ತಿದೆ.
ರಾಹುಲ್ ಗಾಂಧಿ ಅವರ ಈ ಹೇಳಿಕೆ ಆರ್‌ಎಸ್‌ಎಸ್‌ನ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.