ನವದೆಹಲಿ: ಸಂಸದ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದಾಗಲೇ ಸತತ ಮೂರು ದಿನ ರಾಹುಲ್ ಗಾಂಧಿಯವರ ವಿಚಾರಣೆ ನಡೆಸಲಾಗಿತ್ತು. ನ್ಯಾಷನಲ್ ಹೆರಾಲ್ಡ್ನ ಕೋಟ್ಯಂತರ ರೂಪಾಯಿ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಇಂದು ನಾಲ್ಕನೆಯ ದಿನ ರಾಹುಲ್ ವಿಚಾರಣೆ ಎದುರಿಸುತ್ತಿದ್ದಾರೆ.
ಇಂದು ಬೆಳಗ್ಗೆ 11.30ರ ಸುಮಾರಿಗೆ ರಾಹುಲ್ ಗಾಂಧಿ ಇ.ಡಿ. ಕಚೇರಿಗೆ ತೆರಳಿದ್ದಾರೆ. ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡ ಅವರಿಗೆ ಸಾಥ್ ನೀಡಿದರು.
ಇದೇ ವೇಳೆ, ಇ.ಡಿ ವಿಚಾರಣೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಇಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ನ ಹಿರಿಯ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಇದೇ ವೇಳೆ, ಮುನ್ನೆಚ್ಚರಿಕೆಯ ಕ್ರಮವಾಗಿ ಕಾಂಗ್ರೆಸ್ ಮುಖಂಡ ಮತ್ತು ಸ್ವಯಂಘೋಷಿತ ಆಧ್ಯಾತ್ಮಿಕ ಗುರು, ಆಚಾರ್ಯ ಪ್ರಮೋದ್ ಕೃಷ್ಣಂ ಅವರನ್ನು ಸ್ಥಳೀಯ ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ.
ಅದೇ ಇನ್ನೊಂದೆಡೆ, ಸಹೋದರನಿಗೆ ಸಾಥ್ ನೀಡಲು ಪ್ರಿಯಾಂಕಾ ಗಾಂಧಿ ಬರುತ್ತಿರುವ ವೇಳೆ, ರಾಹುಲ್ ಗಾಂಧಿಯವರ ಫೋಟೋ ಹಿಡಿದುಕೊಂಡ ಅಭಿಮಾನಿಯೊಬ್ಬರನ್ನು ಪೊಲೀಸರು ಹಿಡಿದುಕೊಂಡು ಹೋಗುತ್ತಿರುವುದನ್ನು ನೋಡಿದರು. ಕೂಡಲೇ ತಮ್ಮ ಕಾರನ್ನು ನಿಲ್ಲಿಸಿ ತಮ್ಮ ಕಾರಿನಲ್ಲಿಯೇ ಕುಳಿತುಕೊಳ್ಳುವಂತೆ ಹೇಳಿದರು. ಆದರೆ ಪೊಲೀಸರು ಅವರನ್ನು ಕರೆದುಕೊಂಡು ಹೋಗಿದ್ದು, ಇದರ ವಿಡಿಯೋ ಭಾರಿ ವೈರಲ್ ಆಗಿದೆ.