ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಸಂಸದ ರಾಹುಲ್ ಗಾಂಧಿ ಅವರು ಇಂದು ಐದನೇ ದಿನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಹಾಜರಾಗಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.
ಇದಾಗಲೇ 40 ಗಂಟೆಗೂ ಅಧಿಕ ಕಾಲ ಇವರನ್ನು ಕಳೆದ ನಾಲ್ಕು ಬಾರಿ ವಿಚಾರಣೆ ವೇಳೆ ಪ್ರಶ್ನೆ ಮಾಡಲಾಗಿದೆ. ಇದೀಗ ಐದನೆಯ ದಿನವೂ ಕಚೇರಿಯಲ್ಲಿ ರಾಹುಲ್ ಗಾಂಧಿ ಹಾಜರಾಗಿದ್ದಾರೆ.
ಜಾರಿ ನಿರ್ದೇಶನಾಲಯ ನೋಟಿಸ್ ನೀಡುತ್ತಲೇ ಕರೊನಾ ಸೋಂಕಿಗೆ ಗುರಿಯಾಗಿ ಆಸ್ಪತ್ರೆ ಸೇರಿದ್ದ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ನಿನ್ನೆ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇವರು ಇದೇ ಗುರುವಾರ ಅಂದರೆ ಜೂನ್ 23ರಂದು ವಿಚಾರಣೆ ಎದುರಿಸಬೇಕಾಗಿದೆ. ಅವರಿಗೆ 23ರಂದು ಹಾಜರು ಇರುವಂತೆ ಇ.ಡಿ. ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.
ಮಂಗಳವಾರ ಬೆಳಗ್ಗೆ 11.15ಕ್ಕೆ ಸಂಸದ ರಾಹುಲ್ ಗಾಂಧಿ ಅವರು ಜಾರಿ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗೆ ಆಗಮಿಸಿದರು. ಈ ವೇಳೆ ಕಾಂಗ್ರೆಸ್ ನಾಯಕಿ ಹಾಗೂ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ರಾಹುಲ್ ಜೊತೆಗಿದ್ದರು. ಅದೇ ಇನ್ನೊಂದೆಡೆ ಸೋನಿಯಾ ಮತ್ತು ರಾಹುಲ್ ಅವರಿಗೆ ಇ.ಡಿ. ಅಧಿಕಾರಿಗಳು ನೋಟಿಸ್ ನೀಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರೆದಿದೆ.