ನ್ಯೂಸ್

‘ಮೀ ಟೂ’ ಕೇಸ್‌ನಲ್ಲಿ ನೂತನ ಸಿಎಂ: ಐಎಎಸ್‌ ಅಧಿಕಾರಿಗೆ ಮೆಸೇಜ್‌ ಕಳುಹಿಸಿದ್ದ ಸಿಂಗ್‌ಗೆ ಬಂತು ಗ್ರಹಚಾರ

ಚಂಡೀಗಢ: ಪಂಜಾಬ್‌ನ ಸಿಎಂ ಆಗಿದ್ದ ಅಮರೀಂದರ್‌ ಸಿಂಗ್‌ ದಿಢೀರ್‌ ರಾಜೀನಾಮೆ ನೀಡಿದ ನಂತರ ಯಾರು ಈ ಹುದ್ದೆಯನ್ನು ಅಲಂಕರಿಸುತ್ತಾರೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಶುರುವಾಗಿತ್ತು. ಇದೀಗ ಚರಂಜಿತ್ ಸಿಂಗ್ ಚನ್ನಿ ಅವರನ್ನು ನೂತನ ಸಿಎಂ ಮಾಡಲಾಗಿದೆ.

ಅವರು ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಅವರ ಹೆಸರಿಗೆ ‘ಮೀ ಟೂ’ ಆರೋಪ ಕೇಳಿಬಂದಿದೆ. 2018ರಲ್ಲಿ ಐಎಎಸ್ ಅಧಿಕಾರಿಗೆ ಅನುಚಿತ ಮೆಸೇಜ್ ಕಳುಹಿಸಿದ್ದಾರೆ ಎಂಬ ಗಂಭೀರ ಆರೋಪ ಎದುರಿಸಿದ್ದ ಸಿಂಗ್‌ ಅವರ ಕೇಸಿನ್ನೂ ಸರಿಯಾಗಿ ಇತ್ಯರ್ಥವಾಗಿಲ್ಲ. ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಸ್ಥಾನ ಕೊಟ್ಟಿರುವ ಕಾಂಗ್ರೆಸ್‌ ತುಂಬಾ ಒಳ್ಳೆಯ ಕೆಲಸ ಮಾಡಿದೆ ಎಂದು ಬಿಜೆಪಿ ಟಾಂಗ್‌ ನೀಡಿದೆ.

ಐಟಿ ವಿಭಾಗದ ಮುಖ್ಯಸ್ಥರಾಗಿರುವ ಬಿಜೆಪಿ ನಾಯಕ ಅಮಿತ್ ಮಾಳ್ವಿಯಾ ಈ ಕುರಿತು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್‌ನ ನೂತನ ಮುಖ್ಯಮಂತ್ರಿ ಚರಂಜಿತ್ ಚನ್ನಿ ಅವರು 3 ವರ್ಷಗಳ ಹಳೆಯ ಮೀಟೂ ಪ್ರಕರಣದಲ್ಲಿ ಕ್ರಮ ಎದುರಿಸುತ್ತಿದ್ದಾರೆ. ಆಗ ಈ ಕೇಸ್‌ ಅನ್ನು ಮುಚ್ಚಿಹಾಕಲು ಪ್ರಯತ್ನಿಸಿದರೂ ಪಂಜಾಬ್ ಮಹಿಳಾ ಆಯೋಗವು ಅದನ್ನು ಬಿಡದೇ ನೋಟಿಸ್ ಕಳುಹಿಸಿತ್ತು. ಆಗ ಈ ಪ್ರಕರಣಕ್ಕೆ ಪುನಃ ಜೀವ ಬಂದಿದೆ. ಇದರ ನಡುವೆಯೇ ಅವರನ್ನು ಸಿಎಂ ಮಾಡಿದ್ದೀರಿ. ವೆಲ್ ಡನ್ ರಾಹುಲ್.' ಎಂದು ಟೀಕಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಪಂಜಾಬ್ ಮಹಿಳಾ ಸಮಿತಿಯ ಮುಖ್ಯಸ್ಥರು ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದ ಚನ್ನಿ ಅವರಿಗೆ ನೋಟಿಸ್‌ ಕಳುಹಿಸಿತ್ತು. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ತನ್ನ ನಿಲುವನ್ನು ತಿಳಿಸಲು ವಿಫಲವಾದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿತ್ತು. ಇದರಿಮದಾಗಿ ಈ ವಿಷಯ ಮತ್ತೆ ಚಾಲ್ತಿಗೆ ಬಂದಿತ್ತು. ಪಂಜಾಬ್ ಮಹಿಳಾ ಆಯೋಗದ ಅಧ್ಯಕ್ಷೆ ಮನಿಷಾ ಗುಲಾಟಿ ಅವರು ಸರ್ಕಾರದ ಕ್ರಮ ತೆಗೆದುಕೊಂಡ ವರದಿಯನ್ನು ಕೋರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದರು.

ನಂತರ ಈ ಪ್ರಕರಣವನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿಯಾಗಿದ್ದ ಅಮರಿಂದರ್ ಸಿಂಗ್ ಅವರು ಮಹಿಳಾ ಅಧಿಕಾರಿಗೆ ಕ್ಷಮೆಯಾಚಿಸುವಂತೆ ಚನ್ನಿ ಅವರನ್ನು ಕೇಳಿದ್ದರು ಮತ್ತು ಈ ವಿಷಯವನ್ನು ತೃಪ್ತಿಕರವಾಗಿ 'ಪರಿಹರಿಸಲಾಗಿದೆ' ಎಂದು ಕ್ಲೋಸ್‌ ಮಾಡಿದ್ದರು. ಆದರೆ ಈ ಬಗ್ಗೆ ಅಸಮಾಧಾನದ ಹೊಗೆಯಾಡುತ್ತಲೇ ಇತ್ತು. ಇದೀಗ ಮತ್ತೆ ಅವರು ಸಿಎಂ ಸ್ಥಾನ ಅಲಂಕರಿಸಿರುವುದರಿಂದ ವಿಷಯ ಬೆಳಕಿಗೆ ಬಂದಿದೆ.