ಚರಣ್​​ಜಿತ್ ಸಿಂಗ್ ಚನ್ನಿ ಹಾಗೂ ಆಪ್​ ಸಿಎಂ ಅಭ್ಯರ್ಥಿ ಭಗವಂತ್​ ಮಾನ್​ 
ನ್ಯೂಸ್

ಪಂಜಾಬ್​ನಲ್ಲಿ 'ಆಪ್'​ ಇತಿಹಾಸ ಸೃಷ್ಟಿ: ಐದೂವರೆ ತಿಂಗಳು ಗದ್ದುಗೆ ಏರಿದ್ದ ಮೊದಲ ದಲಿತ ಸಿಎಂ ರಾಜೀನಾಮೆ

suchetana

ಚಂಡೀಗಢ: ಪಂಜಾಬ್​ನ ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಮತದಾರರು ನಡೆದುಕೊಂಡಿದ್ದು, ಇದೇ ಮೊದಲ ಬಾರಿಗೆ ಆಮ್​ ಆದ್ಮಿ ಪಕ್ಷ (ಆಪ್​) ಅಧಿಕಾರದ ಗದ್ದುಗೆ ಏರಿದೆ. 1962 ರಿಂದ ಯಾವುದೇ ಪಕ್ಷವು ಪಂಜಾಬ್‌ನಲ್ಲಿ 90 ಕ್ಕಿಂತ ಹೆಚ್ಚು ಸ್ಥಾನಗಳನ್ನು ಇಲ್ಲಿ ಗೆದ್ದಿರಲಿಲ್ಲ, ಇದರಲ್ಲಿಯೂ ಇತಿಹಾಸ ಸೃಷ್ಟಿಸಿದ ಆಪ್​, 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದಿದೆ.

ಇದರ ಬೆನ್ನಲ್ಲೇ ಹಾಲಿ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಂಜಾಬ್​ನ ಮೊದಲ ದಲಿತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದಿದ್ದ ಚನ್ನಿ ಅವರು ಕಳೆದ ಸೆಪ್ಟೆಂಬರ್​ನಲ್ಲಿ ಈ ಸ್ಥಾನಕ್ಕೆ ಏರಿದ್ದರು. ಮುಖ್ಯಮಂತ್ರಿಯಾಗಿದ್ದ ಅಮರೀಂದರ್​ ಸಿಂಗ್​ ಅವರು ಕಾಂಗ್ರೆಸ್​ ಬಗ್ಗೆ ಅಸಮಾಧಾನಪಟ್ಟುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನಕ್ಕೆ ಚನ್ನಿ ಏರಿದ್ದರು. ಆದರೆ ಅವರು ಈಗ ಹೀನಾಯ ಸೋಲು ಅನುಭವಿಸಿದ್ದಾರೆ. ಚಮ್ಕೌರ್ ಸಾಹಿಬ್ ಮತ್ತು ಭದೌರ್ ಎಂಬ ಎರಡು ಕ್ಷೇತ್ರಗಳಿಂದ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿಎಂ ಚನ್ನಿ ಎರಡೂ ಸ್ಥಾನಗಳಲ್ಲಿ ಸೋಲುಂಡಿದ್ದಾರೆ.

ಭರ್ಜರಿ ಗೆಲುವಿನಿಂದ ಆಪ್​ ಮುಖ್ಯಮಂತ್ರಿ ಸ್ಥಾನವನ್ನು ಏರಲಿರುವ ಹಿನ್ನೆಲೆಯಲ್ಲಿ ಚನ್ನಿ ಅವರು, ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೂ ನನಗೆ ಸಂಪುಟದಲ್ಲಿ ಮುಂದುವರೆಯುವುದಾಗಿ ಅವರು ಹೇಳಿದರು.

ಈ ನಡುವೆಯೇ ಟ್ವೀಟ್​ ಮಾಡಿರುವ ಚನ್ನಿ, “ನಾನು ಪಂಜಾಬ್ ಜನರ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಮತ್ತು ಗೆಲುವಿಗಾಗಿ ಆಮ್ ಆದ್ಮಿ ಪಾರ್ಟಿ ಮತ್ತು ಅವರ ಚುನಾಯಿತ ಮುಖ್ಯಮಂತ್ರಿ ಭಗವಂತ್ ಮಾನ್ ಜೀ ಅವರನ್ನು ಅಭಿನಂದಿಸುತ್ತೇನೆ. ಅವರು ಜನರ ನಿರೀಕ್ಷೆಯನ್ನು ಈಡೇರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.

ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ 18 ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಶಿರೋಮಣಿ ಅಕಾಲಿ ದಳ ಮೂರು ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಮತ್ತು ಬಿಎಸ್‌ಪಿ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನವನ್ನು ಗೆದ್ದಿವೆ. ಪಕ್ಷೇತರರೊಬ್ಬರು ಗೆದ್ದಿದ್ದಾರೆ.