ಮೆಹಬೂಬಾಬಾದ್ (ತೆಲಂಗಾಣ): ತರಬೇತಿಯಲ್ಲಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಅವರ ಮೇಲೆ ಸಬ್ ಇನ್ಸ್‌ಪೆಕ್ಟರ್ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್ ನಗರದಲ್ಲಿ ನಡೆದಿದೆ.
29 ವರ್ಷದ ತರಬೇತಿಯಲಿದ್ದ ಮಹಿಳಾ ಪಿಎಸ್‌ಐ ಈ ಕುರಿತು ದೂರು ದಾಖಲು ಮಾಡಿದ್ದಾರೆ. ತಮ್ಮ ಮೇಲೆ ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸರೆಡ್ಡಿ ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ಮಹಿಳೆ ದೂರಿದ್ದಾರೆ. ಈ ದೂರಿನ ಆಧಾರದ ಮೇಲೆ ರೆಡ್ಡಿ ಅವರನ್ನು ತೆಲಂಗಾಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಹಿಳೆಯು ಪ್ರೊಬೆಷನರಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಶ್ರೀನಿವಾಸರೆಡ್ಡಿ ಮತ್ತು ಅವರು ಒಂದೇ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಘಟನೆ ನಡೆದಿದೆ ಎಂದು ದೂರಲಾಗಿದೆ. ವಾರಂಗಲ್ ಪೊಲೀಸ್ ಕಮೀಷನರ್ ತರುಣ್ ಜೋಷಿಗೆ ಮಹಿಳೆ ದೂರು ನೀಡಿದ್ದಾರೆ.
ಬೆಲ್ಲದ ಉಗ್ರಾಣವೊಂದರ ಮೇಲೆ ದಾಳಿ ನಡೆಸಬೇಕೆಂದು ತನ್ನ ಖಾಸಗಿ ವಾಹನದಲ್ಲಿ ಸಂತ್ರಸ್ತ ಮಹಿಳೆಯನ್ನು ಕರೆದೊಯ್ದಿದ್ದ ಶ್ರೀನಿವಾಸ ರೆಡ್ಡಿ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾರೆ. ಮಹಿಳೆ ತೀವ್ರ ಪ್ರತಿರೋಧ ತೋರಿ ತಪ್ಪಿಸಿಕೊಂಡಾಗ ನಂತರ ಶ್ರೀನಿವಾಸರೆಡ್ಡಿ ಮಹಿಳೆಯನ್ನು ಆಕೆಯ ನಿವಾಸದ ಬಳಿ ತಂದು ಬಿಟ್ಟಿದ್ದಾರೆ ಎನ್ನಲಾಗಿದೆ.
ಸದ್ಯ ಮಹಿಳೆಯ ದೂರು ಆಧರಿಸಿ ಶ್ರೀನಿವಾಸರೆಡ್ಡಿಯನ್ನು ಅಮಾನತು ಮಾಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.