ನ್ಯೂಸ್

ನಿಮ್ಮ ಅಮ್ಮನ ಆಸ್ತಿ ಅದು, ನೀವು ಬದುಕಿರುವವರೆಗೂ ಮೊಮ್ಮಕ್ಕಳು ಸೇರಿ ಯಾರಿಗೂ ಪಾಲು ಸಿಗಲ್ಲ

ನಮ್ಮ ತಾಯಿ ತಂದೆ ಇಬ್ಬರೂ ಕರೊನಾ ಬಂದು ಮೂರು ದಿನಗಳ ಅಂತರದಲ್ಲಿ ತೀರಿಕೊಂಡರು. ನಾನು ಮತ್ತು ನನ್ನ ಅಣ್ಣ ಇಬ್ಬರೇ ಮಕ್ಕಳು. ಮೂವರು ಮೇಜರ್‌ ಮೊಮ್ಮಕ್ಕಳು ಇದ್ದಾರೆ. ನಮ್ಮ ತಾಯಿಯ ಸ್ವಯಾರ್ಜಿತವಾದ ಮನೆ ಇದೆ. ಅದನ್ನು ನನಗೆ ಎಂದು ತೀರ್ಮಾನ ಮಾಡಿಕೊಂಡಿದ್ದೇವೆ. ಹಣ ನನ್ನ ಅಣ್ಣನಿಗೆ ಎಂದು ತೀರ್ಮಾನ ಆಗಿದೆ.

ಈಗ ನನ್ನ ಅಣ್ಣನ ಮಗಳು ಅಮೆರಿಕದಲ್ಲಿ ಇದ್ದಾಳೆ. ಮನೆ ನನಗೆ ಮಾಡಿಕೊಡಲು ಅವಳ ಸಹಿ ಬೇಕೇ?

ಉತ್ತರ: ನಿಮ್ಮ ತಾಯಿಯ ಸ್ವಯಾರ್ಜಿತ ಆಸ್ತಿಯಲ್ಲಿ, ಹಾಗೂ ನಿಮ್ಮ ತಂದೆ- ತಾಯಿ ಬಿಟ್ಟು ಹೋಗಿರುವ ಹಣದಲ್ಲಿ , ನಿಮಗೂ ನಿಮ್ಮ ಅಣ್ಣನಿಗೂ ಸಮಪಾಲು ಇರುತ್ತದೆ. ಬೇರೆ ಯಾರಿಗೂ (ಮೊಮ್ಮಕ್ಕಳಿಗೂ), ನೀವು ಬದುಕಿರುವವರೆಗೆ ಪಾಲು ಇರುವುದಿಲ್ಲ. ನೀವು ಮತ್ತು ನಿಮ್ಮ ಅಣ್ಣ ಇಬ್ಬರೂ ನೋಂದಾಯಿತ ವಿಭಾಗ ಪತ್ರ ಮಾಡಿಕೊಳ್ಳಬಹುದು.

ಅದರಲ್ಲಿ ಮನೆ ನಿಮ್ಮ ಭಾಗಕ್ಕೂ, ಹಣವನ್ನು ನಿಮ್ಮ ಅಣ್ಣನ ಭಾಗಕ್ಕೂ ತೆಗೆದಂತೆ ಬರೆಯಿಸಬಹುದು. ನಿಮ್ಮ ಅಣ್ಣನ ಮಕ್ಕಳ ಅಥವಾ ನಿಮ್ಮ ಮಕ್ಕಳ ಸಹಿ ಬೇಕಿರುವುದಿಲ್ಲ, ಏಕೆಂದರೆ ಅವರಿಗೆ ಈ ಆಸ್ತಿಯಲ್ಲಿ ಹಕ್ಕೇ ಇರುವುದಿಲ್ಲ.