ವಿಜಯನಗರ: ವಂಶೋದ್ಧಾರ ಮಾಡಲು ಗಂಡುಮಕ್ಕಳೇ ಬೇಕೆಂದು ಹೆಣ್ಣು ಮಗುವನ್ನು ಭ್ರೂಣದಲ್ಲಿಯೇ ಹೊಸಕಿ ಹಾಕುತ್ತಿರುವವರು ಅದೆಷ್ಟೋ ಮಂದಿ. ಗಂಡು ಮಗು ಹುಟ್ಟಲಿಲ್ಲ ಎಂದು ಮರುಮದುವೆಯಾಗುವುದು, ಸೊಸೆಗೆ ಚಿತ್ರಹಿಂಸೆ ನೀಡುವುದು, ಆಕೆಯ ಕೊಲೆ ಮಾಡುವುದು... ಇಂಥ ಅನಾಚಾರಗಳು ಇಂದಿಗೂ ನಡೆಯುತ್ತಲೇ ಇವೆ. ಇಂಥ ಮನಸ್ಥಿತಿಯುಳ್ಳವರಿಗೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದ ಈ ಘಟನೆ ಕಣ್ತೆರೆಸಬೇಕಿದೆ.
ನಾಲ್ಕು ಪುತ್ರರು ಮತ್ತು ನಾಲ್ಕು ಪುತ್ರಿಯರನ್ನು ಹೆತ್ತಿರುವ ಬಣಕಾರ ಕೊಟ್ರಪ್ಪ, ಹಾಗೂ ಅನ್ನಪೂರ್ಣಮ್ಮ ಎಂದ ವೃದ್ಧ ದಂಪತಿಯ ಗೋಳಿನ ಕಥೆಯಿದು. ತಮ್ಮ ಬಳಿ ಇರುವ ಆಸ್ತಿಯನ್ನು ತಮ್ಮೆಲ್ಲಾ ಮಕ್ಕಳಿಗೂ ಹಂಚಿಕೊಟ್ಟಿದ್ದಾರೆ ಈ ದಂಪತಿ. ತಮ್ಮ ಪಾಲಿನ ಆಸ್ತಿಯನ್ನು ಪಡೆದುಕೊಂಡಿರುವ ನಾಲ್ವರು ಗಂಡುಮಕ್ಕಳು, ಈಗ ಹೆತ್ತವರನ್ನೇ ಬೀದಿಗೆ ತಳ್ಳಿ, ಎಳೆದಾಡಿದ್ದಾರೆ! ಪುತ್ರರ ಈ ಅನಾಚಾರದಿಂದ ಬೇಸತ್ತು ಪುತ್ರಿಯರ ಮನೆಯಲ್ಲಿ ಹೆತ್ತವರು ಆಶ್ರಯ ಪಡೆದಿದ್ದಾರೆ.
ಆದರೆ ಇಲ್ಲಿಗೂ ಸುಮ್ಮನಾಗದ ಪುತ್ರಮಹಾಶಯರು ಅಲ್ಲಿಯೂ ಹೋಗಿ ತಮ್ಮ ಸಹೋದರಿಯರು ಅವರ ಮಕ್ಕಳು ಮೇಲೂ ಹಲ್ಲೆ ಮಾಡಿದ್ದಾರೆ. ಇದಕ್ಕೆ ಕಾರಣ ಏನೆಂದರೆ ಆಸ್ತಿಯನ್ನು ತಮಗೆ ಮಾತ್ರ ನೀಡುವ ಬದಲು ಹೆಣ್ಣುಮಕ್ಕಳಿಗೂ ನೀಡಿದ್ದಾರೆ ಎಂಬ ಕೋಪ! ಇದ್ದಬಿದ್ದ ಆಸ್ತಿಯನ್ನೆಲ್ಲಾ ತಮ್ಮ ಪಾಲಿಗೇ ಮಾಡಬೇಕಿತ್ತು. ಅದನ್ನು ಬಿಟ್ಟು ಹೆಣ್ಣುಮಕ್ಕಳಿಗೂ ಪಾಲು ಕೊಟ್ಟಿದ್ದು ಸರಿಯಲ್ಲ ಎಂದಿರುವ ಈ ಗಂಡುಮಕ್ಕಳು ಅಪ್ಪ-ಅಮ್ಮ ಸೇರಿ ಎಲ್ಲರ ಮೇಲೂ ಹಲ್ಲೆ ನಡೆಸಿದ್ದಾರೆ!
ನಮ್ಮ ತಂದೆ ತಾಯಿಯನ್ನು ನೀವ್ಯಾಕೆ ನೋಡಿಕೊಳ್ಳುತ್ತಿದ್ದಿರಿ ಅಂತ ಸಹೋದರಿಯ ಮೇಲೆ ದೌರ್ಜನ್ಯ ಮಾಡಿದ್ದಾರೆ. ಇದೀಗ ಈ ವೃದ್ಧ ದಂಪತಿ ನಮಗೆ ನ್ಯಾಯ ಕೊಡಿ ಅಂತ ವೃದ್ಧ ದಂಪತಿಗಳಿಂದ ಎಸ್ಪಿ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)