ನ್ಯೂಸ್

ಅಜ್ಜಿಗೆ ಅವರ ತಂದೆಯಿಂದ ಬಂದ ಆಸ್ತಿಯನ್ನು ವಿಲ್‌ ಮಾಡಬಹುದೇ? ಕಾನೂನು ಹೇಳುವುದು ಏನು?

ಪ್ರಶ್ನೆ: ನನಗೆ 65 ವರ್ಷ ವಯಸ್ಸು. ನನ್ನ ಅಜ್ಜಿ ಅವರ ತಂದೆ ತಾಯಿಗೆ ಒಬ್ಬಳೇ ಮಗಳು. ಅಜ್ಜಿಗೆ ಅವರ ತಂದೆಯ ಕಡೆಯಿಂದ ಬಂದ ಏಳು ಎಕರೆ ಜಮೀನನ್ನು ನನ್ನ ಅಜ್ಜಿ ನನಗೆ ಒಂದು ಸಾವಿರದ ತೊಂಬತ್ತರಲ್ಲಿ ವಿಲ್‌ ಮಾಡಿ ಕೊಟ್ಟಿದ್ದಾರೆ. ಅಜ್ಜಿಗೆ ನಾಲ್ಕು ಹೆಣ್ಣು ಮಕ್ಕಳು ಅವರಿಗೆಲ್ಲಾ ಮದುವೆ ಆಗಿದೆ. ಗಂಡು ಮಕ್ಕಳಿಲ್ಲದ ಕಾರಣ ನನ್ನನ್ನು ಸಾಕಿ ನನಗೇ ವಿಲ್‌ ಮಾಡಿದ್ದಾರೆ. ಈಗ ಹೆಣ್ಣು ಮಕ್ಕಳು ನಮಗೂ ಪಾಲು ಬೇಕು ಎನ್ನುತ್ತಿದ್ದಾರೆ . ಅವರಿಗೆ ಹಕ್ಕು ಇರುತ್ತದೆಯೇ ? ದಯವಿಟ್ಟು ತಿಳಿಸಿ.

ಉತ್ತರ: ನಿಮ್ಮ ಅಜ್ಜಿಗೆ ಅವರ ತಂದೆಯಿಂದ ಬಂದ ಆಸ್ತಿ , ಆಕೆಯ ಪ್ರತ್ಯೇಕ , ಸಂಪೂರ್ಣ ಹಕ್ಕಿರುವ ಆಸ್ತಿ ಆಗಿರುತ್ತದೆ. ಆಕೆ ಆ ಆಸ್ತಿಯನ್ನು ಯಾವುದೇ ರೀತಿಯಲ್ಲಿ ಬೇಕಾದರೂ ಉಪಯೋಗಿಸಬಹುದು. ಹೇಗೆ ಬೇಕಾದರೂ ಪರಭಾರೆ ಮಾಡಬಹುದು. ಇಂತಹ ತನ್ನದೇ ಆದ ಆಸ್ತಿಯನ್ನು, ನಿಮ್ಮ ಅಜ್ಜಿ ಸಕ್ರಮವಾಗಿ ತನ್ನ ಸ್ವಂತ ಇಚ್ಛೆಯಿಂದ ,ನಿಮಗೆ ವಿಲ್‌ ಮಾಡಿದ್ದರೆ ನೀವು ಹೆದರಬೇಕಾಗಿಲ್ಲ. ಅಜ್ಜಿಯ ಬೇರೆ ಮಕ್ಕಳಿಗೆ ಹಕ್ಕು ಬರುವುದಿಲ್ಲ. ವಿಲ್‌ ಮೋಸದಿಂದ ಮಾಡಿಸಿಕೊಂಡಿದ್ದರೆ ಮಾತ್ರ ಹೆದರಬೇಕು.