ನ್ಯೂಸ್

ಪ್ರಿಯಾಂಕಾ ಗಾಂಧಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳಾ ಕಾನ್ಸ್‌ಟೆಬಲ್‌ಗಳಿಗೆ ಗ್ರಹಚಾರ!

ಲಖನೌ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್‌ಗಳಿಗೆ ಗ್ರಹಚಾರ ಒಕ್ಕರಿಸಿದ್ದು, ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಉತ್ತರ ಪ್ರದೇಶ ಪೊಲೀಸ್‌ ಇಲಾಖೆ ಮುಂದಾಗಿದೆ.

ಸರ್ಕಾರಿ ನಿಯಮದ ಅನುಸಾರ ಈ ರೀತಿ ಸರ್ಕಾರಿ ಉದ್ಯೋಗಿಗಳು ಕರ್ತವ್ಯದಲ್ಲಿ ಇರುವಾಗ ಈ ರೀತಿ ಫೋಟೋ ತೆಗೆದುಕೊಳ್ಳುವುದು ನಿಯಮಬಾಹಿರ. ಈ ಹಿನ್ನೆಲೆಯಲ್ಲಿ, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಇಲಾಖೆ ಹೇಳಿದೆ.

25 ಲಕ್ಷ ರೂಪಾಯಿ ಕಳ್ಳತನ ಮಾಡಿದ ಆರೋಪದಲ್ಲಿ ಅರುಣ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದರು. ಆದರೆ ಆ ವ್ಯಕ್ತಿಯು ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿರುವುದಾಗಿ ಆರೋಪಿಸಲಾಗಿದೆ. ಈ ವ್ಯಕ್ತಿಯ ಕುಟುಂಬದವರಸ್ಥರಿಗೆ ಸಾಂತ್ವನ ಹೇಳಲು ಪ್ರಿಯಾಂಕಾ ಆಗ್ರಾಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಲಖನೌ ಬಳಿ ಮಹಿಳಾ ಕಾನ್ಸ್‌ಸ್ಟೆಬಲ್‌ಗಳು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.

ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಕಾನ್ಸ್‌ಟೆಬಲ್‌ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಈ ವಿಷಯ ತಿಳಿಯುತ್ತಲೇ ಭಾರಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕಾ, ನನ್ನ ಜತೆ ಫೋಟೋ ತೆಗೆದುಕೊಳ್ಳುವುದು ಅಪರಾಧ ಆಗಿದ್ದರೆ, ನನಗೆ ಶಿಕ್ಷೆ ನೀಡಬೇಕು, ಆದರೆ ಮಹಿಳಾ ಕಾನ್ಸ್‌ಸ್ಟೇಬಲ್‌ಗಳನ್ನು ದೂಷಿಸುವುದು ಏಕೆ ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. ಶ್ರಮಜೀವಿ ಮತ್ತು ನಿಷ್ಠಾವಂತ ಪೊಲೀಸರ ವೃತ್ತಿಯನ್ನು ಹಾಳುಮಾಡುವುದು ಸರ್ಕಾರಕ್ಕೆ ಕ್ಷೋಭೆಯಲ್ಲ ಎಂದು ಕಿಡಿ ಕಾರಿದ್ದಾರೆ.