ನ್ಯೂಸ್

ಗಂಡಿನ ಮನೆಯವರು ಕೇಳದಿದ್ದರೂ ಮಗಳಿಗೆ ಕೊಡುವ ಚಿನ್ನ, ಒಡವೆ ವರದಕ್ಷಿಣೆ ವ್ಯಾಪ್ತಿಗೆ ಬರಲ್ಲ ಎಂದ ಹೈಕೋರ್ಟ್‌

ತಿರುವನಂತಪುರ: ತಮ್ಮ ಮಗಳು ಸುಖವಾಗಿ ಇರಲಿ ಎಂದು ಪಾಲಕರು ಒಂದಿಷ್ಟು ಉಡುಗೊರೆಯನ್ನು ಆಕೆಗೆ ನೀಡಿದ್ದ ಪಕ್ಷದಲ್ಲಿ ಅದು ವರದಕ್ಷಿಣೆ ಎಂದು ಪರಿಗಣಿಸುವುದು ಸರಿಯಲ್ಲ, ಒಂದು ವೇಳೆ ಗಂಡಿನ ಮನೆಯವರು ಯಾವುದೇ ಬೇಡಿಕೆ ಇಟ್ಟಿರದಿದ್ದರೂ ಈ ರೀತಿಯಾಗಿ ಮಗಳಿಗೆ ನೀಡುವ ಉಡುಗೊರೆ ವರದಕ್ಷಿಣೆಯಾಗುವುದಿಲ್ಲ. ಇದು ವರದಕ್ಷಿಣೆ ನಿಷೇಧ ಕಾಯ್ದೆ 1961 ರ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ.

ತಮ್ಮ ಪತ್ನಿ ತಮ್ಮ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್‌ ಹಾಕಿದ್ದು, ಅದನ್ನು ರದ್ದು ಮಾಡುವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ಈ ಆದೇಶ ಹೊರಡಿಸಿದೆ.

ಈ ಪ್ರಕರಣದಲ್ಲಿ ಕಳೆದ ವರ್ಷ ದೀಪ್ತಿ ಮತ್ತು ವಿಷ್ಣು ಅವರ ವಿವಾಹವಾಗಿದೆ. ಆದರೆ ದಂಪತಿ ನಡುವೆ ಮನಸ್ತಾಪ ಉಂಟಾಗಿದೆ. ದೀಪ್ತಿ ಅವರು ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್‌ ದಾಖಲಿಸಿದ್ದರು. ವರದಕ್ಷಿಣೆ ನೋಡಲ್ ಅಧಿಕಾರಿಯ ಮುಂದೆ ಅವರು ಈ ಕೇಸ್ ದಾಖಲು ಮಾಡಿದ್ದರು. ವರದಕ್ಷಿಣೆಯ ರೂಪದಲ್ಲಿ ತಮ್ಮ ಪತಿ ಚಿನ್ನದ ಒಡವೆಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ದೂರಿದ್ದರು. ಅದನ್ನು ವಾಪಸ್‌ ಕೊಡುವಂತೆ ಆದೇಶವಾಗಿತ್ತು.

ಈ ಆದೇಶವನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನಾನು ಯಾವುದೇ ವರದಕ್ಷಿಣೆ ಪಡೆದುಕೊಂಡಿಲ್ಲ. ಆಕೆಯ ತವರಿನವರು ಮಗಳಿಗಾಗಿ ತಮ್ಮ ಇಚ್ಛೆಯಿಂದ ಚಿನ್ನಾಭರಣ ನೀಡಿದ್ದಾರೆ. ಅದು ನಮ್ಮಿಬ್ಬರ ಹೆಸರಿನಲ್ಲಿ ಬ್ಯಾಂಕ್‌ ಲಾಕರ್‌ನಲ್ಲಿದ್ದು, ಅದರ ಕೀಲಿ ಕೂಡ ಪತ್ನಿಯ ಬಳಿಯೇ ಇದೆ. ಹಾಗಿದ್ದರೂ ಸುಖಾ ಸುಮ್ಮನೆ ವರದಕ್ಷಿಣೆ ಕಿರುಕುಳ ಕೇಸ್‌ ಹಾಕಿದ್ದಾಳೆ ಎಂದು ವಿಷ್ಣು ದೂರಿದ್ದರು.

ಇದನ್ನು ಆಲಿಸಿದ ನ್ಯಾಯಮೂರ್ತಿ ಎಂ.ಆರ್. ಅನಿತಾ, ವರದಕ್ಷಿಣೆ ನಿಷೇಧ ಕಾಯ್ದೆ 1961 ರ ಅಡಿಯಲ್ಲಿ ವಧುವಿನ ಕ್ಷೇಮಕ್ಕಾಗಿ ಮದುವೆಯ ಸಮಯದಲ್ಲಿ ನೀಡಿದ ಉಡುಗೊರೆಗಳನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ. ಇಲ್ಲಿ ಲಾಕರ್‌ ಕೀ ಕೂಡ ಆಕೆಯ ಕೈಯಲ್ಲಿಯೇ ಇದ್ದು, ಅದನ್ನು ಅವಳ ಪಾಲಕರು ಮಗಳ ಮೇಲಿನ ಪ್ರೀತಿಗಾಗಿ ನೀಡಿದ್ದರೇ ವಿನಾ ಗಂಡಿನ ಮನೆಯವರು ಯಾವುದೇ ರೀತಿಯ ಡಿಮಾಂಡ್‌ ಮಾಡಿರಲಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಹೇಳುವ ಮೂಲಕ ಪತಿಯ ಅರ್ಜಿಯನ್ನು ಮಾನ್ಯ ಮಾಡಿದೆ. ವರದಕ್ಷಿಣೆ ಕಿರುಕುಳ ಕೇಸ್‌ನಿಂದ ಅವರನ್ನು ಮುಕ್ತಗೊಳಿಸಿದೆ.