ಕರ್ನೂಲ್ (ಆಂಧ್ರಪ್ರದೇಶ): ಪ್ರೈಮರಿಯಲ್ಲಿರುವಾಗ ಪೆನ್ನು, ಪೆನ್ಸಿಲ್ ಕದಿಯೋದು, ವಾಪಸ್ ಕೊಡದೇ ಇರೋದು, ಮಾತು ಬಿಡೋದು, ಹೊಡೆದು, ಚಿವುಟಿಕೊಳ್ಳುವುದು ಎಲ್ಲವೂ ನಡೆದೇ ಇರುತ್ತದೆ. ಹೆಚ್ಚೆಂದರೆ ಪುಟಾಣಿಗಳು ತಮ್ಮ ಶಿಕ್ಷಕರಲ್ಲಿ ಇದರ ಕಂಪ್ಲೇಂಟ್ ಮಾಡುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಒಂದನೆಯ ತರಗತಿಯ ಪೋರನೊಬ್ಬ ಸೀದಾ ಪೊಲೀಸ್ ಠಾಣೆಗೆ ಹೋಗಿ ಸಹಪಾಠಿ ವಿರುದ್ಧ ದೂರು ದಾಖಲಿಸಿದ್ದಾನೆ!
ಇಂಥದ್ದೊಂದು ಘಟನೆ ನಡೆದಿರುವುದು ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯಲ್ಲಿ. ಇದರ ವಿಡಿಯೋ ಪೊಲೀಸ್ ಇಲಾಖೆಯ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಇದು ಸಕತ್ ವೈರಲ್ ಆಗಿದ್ದು, ಮುದ್ದು ಮಕ್ಕಳ ಜಗಳ, ಮಾತು ಕೇಳಿ ಕಮೆಂಟಿಗರು ಸೋ ಸ್ವೀಟ್ ಎನ್ನುತ್ತಿದ್ದಾರೆ.
ಒಬ್ಬ ಬಾಲಕ ಪೊಲೀಸರಲ್ಲಿ ಹೋಗಿ ದೂರು ಕೊಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ಘಟನೆಗೆ ಸಾಕ್ಷಿ ಹೇಳಲು ಎಂಬಂತೆ ಆತನ ಸ್ನೇಹತರೂ ಠಾಣೆಗೆ ಬಂದಿದ್ದಾರೆ! ಪೊಲೀಸರು ಏನಾಯಿತು, ಏನು ನಿಮ್ಮ ಸಮಸ್ಯೆ ಎಂದಾಗ ಬಾಲಕ ಮುದ್ದುಮುದ್ದು ಮಾತಿನಲ್ಲಿ ‘ಇವನು ನನ್ನ ಪೆನ್ಸಿಲ್ ತೆಗೆದುಕೊಂಡಿದ್ದಾನೆ. ವಾಪಸ್ ಕೊಡಲಿಲ್ಲ. ನೀವು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಿ’ ಎಂದಿದ್ದಾನೆ.
ಅದಕ್ಕೆ ಪೊಲೀಸರು ಈಗ ನಾನೇನು ಮಾಡಲಿ ಎಂದು ಕೇಳಿದ್ದಾರೆ. ಆಗ ಪುಟಾಣಿ, ‘ಈತನ ವಿರುದ್ಧ ಪ್ರಕರಣ ದಾಖಲಿಸಿ, ಕೇಸ್ ಹಾಕಿ’ ಎಂದಿದ್ದಾರೆ. ಈತನ ಮಾತು ಕೇಳುತ್ತಿದ್ದಂತೆಯೇ ಪೊಲೀಸರು ಇಬ್ಬರೂ ಮಕ್ಕಳನ್ನು ಒಟ್ಟಿಗೇ ಕುಳ್ಳರಿಸಿಕೊಂಡು ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಿದ್ದಾರೆ. ಇಬ್ಬರೂ ಮಕ್ಕಳು ತಮ್ಮ ಸಮಸ್ಯೆ ಬಗೆಹರಿಯಿತು ಎಂದು ಕೊನೆಗೆ ವಾಪಸ್ ಹೋಗಿದ್ದನ್ನು ವಿಡಿಯೋದಲ್ಲಿ ನೋಡಬಹುದು.
ಇಲ್ಲಿದೆ ನೋಡಿ ಪುಟಾಣಿಗಳ ವಿಡಿಯೋ: