ನ್ಯೂಸ್

ಜರ್ಮನಿಯಲ್ಲಿ ಭಾರತದ ದೇಸಿ ಉಡುಗೊರೆಯ ಘಮಲು: ಏಳು ದೇಶಗಳ ಮುಖಂಡರಿಗೆ ಮೋದಿ ಗಿಫ್ಟ್​

ಜರ್ಮನಿ: ಯುರೋಪ್ ರಾಷ್ಟ್ರ ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಏಳು ದೇಶಗಳ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಉಡುಗೊರೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ಶೃಂಗಸಭೆಯಲ್ಲಿ ಕೆನಡಾ, ಫ್ರಾನ್ಸ್​, ಜರ್ಮನಿ, ಇಟಲಿ, ಜಪಾನ್​, ಯುನೈಟೆಡ್​ ಕಿಂಗ್​ಡಮ್​ ಮತ್ತು ಯುರೋಪಿಯನ್​ ಒಕ್ಕೂಟದ ನಾಯಕರು ಭಾಗವಹಿಸಿದ್ದರು. ಇವರೆಲ್ಲರಿಗೂ ಭಾರತದಲ್ಲಿಯೇ ತಯಾರಾಗುವ ವಿವಿಧ ರೀತಿಯ ಉಡುಗೊರೆಯನ್ನು ಪ್ರಧಾನಿ ನೀಡಿದ್ದು ಜರ್ಮನಿಯಲ್ಲಿ ಮೋದಿ ಹವಾ ಜೋರಾಗಿ ನಡೆಯಿತು.

ಪ್ರಧಾನಿ ನೀಡಿದ್ದೇನು?
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರಿಗೆ ಛತ್ತೀಸ್‌ಗಢದಿಂದ ರಾಮಾಯಣದ ಡೋಕ್ರಾ ಕಲೆಯನ್ನು ಉಡುಗೊರೆಯಾಗಿ ನೀಡಲಾಗಿದೆ. ಡೋಕ್ರಾ ಕಲೆಯು ನಾನ್-ಫೆರಸ್ ಮೆಟಲ್ ಎರಕದ ಕಲೆಯಾಗಿದ್ದು, ಈ ರೀತಿಯ ಲೋಹದ ಎರಕಹೊಯ್ದವನ್ನು ಭಾರತದಲ್ಲಿ 4,000 ವರ್ಷಗಳಿಂದಲೂ ಬಳಸಲಾಗುತ್ತಿದೆ.

ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಉತ್ತರ ಪ್ರದೇಶದ ನಿಜಾಮಾಬಾದ್‌ನಿಂದ ಕಪ್ಪು ಮಡಿಕೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಡಿಕೆಯು ಕಪ್ಪು ಬಣ್ಣವನ್ನು ಹೊಂದಿದ್ದು, ನೋಡಲು ಸುಂದರವಾಗಿದೆ. ಇದನ್ನು ಮಾಡಲು ವಿಶೇಷ ತಂತ್ರವನ್ನು ಬಳಸಲಾಗಿದೆ. ಫ್ರಾನ್ಸ್​ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಇತ್ತಾರ್ (ನೈಸರ್ಗಿಕ ಮೂಲಗಳಿಂದ ಪಡೆದ ಸುಗಂಧ ದ್ರವ್ಯ) ಬಾಟಲಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಲಖನೌದಲ್ಲಿ ತಯಾರಾದ ಜರ್ದೋಜಿ ಬಾಕ್ಸ್‌ನಲ್ಲಿ ಈ ಉಡುಗೊರೆ ನೀಡಲಾಗಿದೆ.

ಆಗ್ರಾದ ತಯಾರಾಗುವ, ಮಹಿಳೆಯರೇ ಕೈಯಿಂದ ತಯಾರಿಸುವ ಮೂಂಜ್ ಬುಟ್ಟಿಗಳನ್ನು ಇಟಾಲಿಯನ್​ ಪ್ರಧಾನಿಗೆ ಮೋದಿ ನೀಡಿದರು. ರಾಮಾಯಣ ಸಂಪ್ರದಾಯವು ಇಂಡೋನೇಷಿಯನ್ ಸಂಸ್ಕೃತಿಯ ನಿರಂತರ ಭಾಗವಾಗಿದೆ, ಮೋದಿ ಅದರ ಅಧ್ಯಕ್ಷರಿಗೆ ವಾರಣಾಸಿಯಲ್ಲಿ ತಯಾರಾದ "ರಾಮ್ ದರ್ಬಾರ್" ಉಡುಗೊರೆಯಾಗಿ ನೀಡಿದರೆ, ಕಾಶ್ಮೀರದ ರೇಷ್ಮೆ ಕಾರ್ಪೆಟ್​ ಅನ್ನು ಕೆನಡಾ ಅಧ್ಯಕ್ಷರಿಗೆ ನೀಡಿದರು.

ಪ್ರಧಾನಿ ಮೋದಿ ಟ್ವೀಟ್​
ಜರ್ಮನಿಯಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್​ಗೆ ಪ್ರಧಾನಿ ಮೋದಿ ತೆರಳಿದ್ದಾರೆ. ಜರ್ಮನಿ ಭೇಟಿ ಫಲಪ್ರದವಾಗಿತ್ತು ಎಂದು ಟ್ವೀಟ್ ಮಾಡಿರುವ ಅವರು, ಜರ್ಮನಿಯ ಆತಿಥ್ಯಕ್ಕೆ ಮನಸೋತಿದ್ದೇನೆ. ಇಲ್ಲಿನ ಆತಿಥ್ಯಕ್ಕೆ ಜರ್ಮನ್ ಸರ್ಕಾರಕ್ಕೆ ಮತ್ತು ಇಲ್ಲಿನ ನಾಗರಿಕರಿಗೆ ಧನ್ಯವಾದ ಹೇಳುತ್ತೇನೆ. ಭಾರತ-ಜರ್ಮನಿ ಸ್ನೇಹವು ಮುಂಬರುವ ದಿನಗಳಲ್ಲಿ ಹೊಸ ದಿಕ್ಕನ್ನು ಕಾಣಲಿದೆ ಎಂದು ನಾನು ವಿಶ್ವಾಸ ಹೊಂದಿದ್ದೇನೆ ಎಂದಿದ್ದಾರೆ.

"ನಾನು G7 ಶೃಂಗಸಭೆಯಲ್ಲಿ ಭಾಗವಹಿಸಿ ಜರ್ಮನಿ ಭೇಟಿ ಫಲಪ್ರದಾಯಕವಾಗಿತ್ತು. ಹಲವಾರು ವಿಶ್ವ ನಾಯಕರೊಂದಿಗೆ ಸಂವಾದ ನಡೆಸಿದ್ದೇನೆ, ಮ್ಯೂನಿಚ್‌ನಲ್ಲಿ ಸ್ಮರಣೀಯ ಸಮುದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಜರ್ಮನಿ ಭೇಟಿ ಸಂದರ್ಭದಲ್ಲಿ ಜಾಗತಿಕ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಅನೇಕ ವಿಷಯಗಳನ್ನು ಚರ್ಚಿಸಲು ಸಾಧ್ಯವಾಯಿತು ಎಂದಿದ್ದಾರೆ.