ಗಾಂಧೀನಗರ: ಗುಜರಾತ್‍ನ ಭರೂಚ್‍ನಲ್ಲಿ ಸರ್ಕಾರಿ ಯೋಜನೆಗಳ ಕುರಿತಂತೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಾರ್ಯಕ್ರಮವೊಂದರಲ್ಲಿ ಅಂಧ ವ್ಯಕ್ತಿಯೊಬ್ಬರ ಸಮಸ್ಯೆಯನ್ನು ಕೇಳಿ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿರುವ ಘಟನೆ ನಡೆದಿದೆ.
ಈ ಕಾರ್ಯಕ್ರಮದಲ್ಲಿ ಯಾಕೂಬ್ ಪಟೇಲ್ ಎನ್ನುವವರ ಮಾತನಾಡುತ್ತಾ ಸಮಸ್ಯೆ ಹೇಳಿಕೊಳ್ಳುತ್ತಿದ್ದರು. 'ನನಗೆ ಇಬ್ಬರು ಹೆಣ್ಣುಮಕ್ಕಳು. ಅವರಲ್ಲಿ ನನ್ನ ಹಿರಿಯ ಮಗಳು ವೈದ್ಯೆಯಾಗಬೇಕೆಂಬ ಆಸೆಯನ್ನು ಹೊಂದಿದ್ದಾಳೆ' ಎಂದರು. ಈ ವೇಳೆ ವೈದ್ಯೆಯಾಗಲು ಪ್ರೇರಣೆ ಏನು ಎಂದು ಪ್ರಧಾನಿ ಬಾಲಕಿಯನ್ನು ಕೇಳಿದಾಗ, ಆಕೆ, ಭಾವುಕಳಾಗಿ, ತನ್ನ ತಂದೆಯ ಅನಾರೋಗ್ಯ ಸಮಸ್ಯೆಗಳಿಂದ ವೈದ್ಯೆಯಾಗಬೇಕೆಂದು ನಿರ್ಧರಿಸಿದೆ ಎಂದಿದ್ದಾರೆ. ಇದನ್ನು ಕೇಳಿ ಪ್ರಧಾನಿ ಮೋದಿಯವರು ಒಂದು ಕ್ಷಣ ಭಾವುಕರಾದರು. ನಿಮ್ಮ ಮಗಳ ಕನಸನ್ನು ನನಸಾಗಿಸಲು ಏನಾದರೂ ಸಹಾಯ ಬೇಕಿದ್ದರೆ ತಿಳಿಸಿ ಎಂದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಲ್ಕು ನಿಮಿಷವಿರುವ ವೀಡಿಯೋದಲ್ಲಿ, ಪ್ರಧಾನಿಯವರು ಯಾಕೂಬ್ ಅವರಿಗೆ ಈದ್ ಹಬ್ಬವನ್ನು ಹೇಗೆ ಆಚರಿಸಿದಿರಿ ಎಂಬೆಲ್ಲಾ ಪ್ರಶ್ನೆ ಕೇಳಿ, ಮಗಳ ಆಸೆ ಪೂರೈಸುವ ಭರವಸೆ ಕೊಟ್ಟಿದ್ದಾರೆ. ಇದೇ ವೇಳೆ ಆ ವ್ಯಕ್ತಿ ಕೂಡ ಭಾವುಕರಾಗಿದ್ದಾರೆ.