ನ್ಯೂಸ್

13 ದೇಶಗಳ ಕರೊನಾ ಬಿಕ್ಕಟ್ಟು ನಿರ್ವಹಣೆ: ಭಾರತದ ಪ್ರಧಾನಿಗೆ ಸಿಕ್ಕ ಸ್ಥಾನ ಎಷ್ಟು ಗೊತ್ತಾ?

ನವದೆಹಲಿ: ಮಾರಕ ಕರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ 13 ದೇಶಗಳ ಸಮೀಕ್ಷೆ ನಡೆಸಲಾಗಿದೆ. ಕಳೆದ ಏಪ್ರಿಲ್​ನಲ್ಲಿ 10 ದೇಶಗಳ ಸಮೀಕ್ಷೆ ನಡೆಸಲಾಗಿತ್ತು. ಆದರೆ ಇದೀಗ 13 ದೇಶಗಳ ಸಮೀಕ್ಷೆ ನಡೆಸಲಾಗಿದೆ.

ಅಮೆರಿಕದ 'ಮಾರ್ನಿಂಗ್ ಕನ್ಸಲ್ಟ್' ಎಂಬ ಸಂಸ್ಥೆ ಕಳೆದ ಏಪ್ರಿಲ್​ನಲ್ಲಿ ಸಮೀಕ್ಷೆ ನಡೆಸಿದ್ದಾಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದರು. ಇದೀಗ ಡಿಸೆಂಬರ್​ 22ರವರೆಗಿನ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಂಡು ಇದೇ ಸಂಸ್ಥೆ 13 ದೇಶಗಳ ಸಮೀಕ್ಷೆ ನಡೆಸಿದೆ.

ಕುತೂಹಲದ ವಿಷಯವೆಂದರೆ ಪ್ರಧಾನಿ ಮೋದಿಯವರೇ ಪುನಃ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಆದರೆ 10 ದೇಶಗಳ ಸಮೀಕ್ಷೆ ಮಾಡಿದಾಗ ಅಂದರೆ ಏಪ್ರಿಲ್​ನಲ್ಲಿ ಇವರಿಗೆ 68 ಅಂಕಗಳು ಲಭಿಸಿದ್ದವು. ಇದೀಗ 13 ದೇಶಗಳ ಸಮೀಕ್ಷೆ ನಡೆಸಿದಾಗ ಇವರಿಗೆ 55 ಅಂಕಗಳು ಲಭಿಸಿವೆ. ಆದರೆ ಇತರ ದೇಶಗಳ ನಾಯಕರಿಗಿಂತಲೂ ಇವರಿಗೆ ಸಿಕ್ಕಿರುವ ಅಂಕಗಳೇ ಅಧಿಕ ಎಂದು ಮಾರ್ನಿಂಗ್ ಕನ್ಸಲ್ಟ್ ಹೇಳಿದೆ.

ಜನಸಂಖ್ಯೆಯ ಆಧಾರದ ಮೇಲೆ ಕರೊನಾ ವೈರಸ್​ ಬಿಕ್ಕಟ್ಟು ಸಮರ್ಥವಾಗಿ ನಿಭಾಯಿಸಿರುವ ನಾಯಕ ಇವರು ಎನಿಸಿಕೊಂಡಿದ್ದಾರೆ.

ಇನ್ನುಳಿದಂತೆ ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆಸ್‌ ಮ್ಯಾನ್ಯುಯೆಲ್‌ ಲೋಪೆಜ್‌ 29 ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ಗೆ 27 ಅಂಕಗಳು ಬಂದಿದ್ದು, ಮೋದಿ ನಂತರದ ಸ್ಥಾನ ಪಡೆದುಕೊಂಡಿದ್ದಾರೆ. ಆಸ್ಪ್ರೇಲಿಯಾ, ಬ್ರೆಜಿಲ್‌, ಕೆನಡಾ, ಫ್ರಾನ್ಸ್‌, ಜರ್ಮನಿ, ಭಾರತ, ಇಟಲಿ, ಜಪಾನ್‌, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್‌, ಬ್ರಿಟನ್‌, ಅಮೆರಿಕದಲ್ಲಿ ಈ ಸಮೀಕ್ಷೆ ನಡೆದಿತ್ತು.