ನ್ಯೂಸ್

ಗೌರಿ‌ ಹತ್ಯೆ ಆರೋಪಿಯಿಂದ ಪಿಐಎಲ್‌: ಕರೊನಾ ಮಾಹಿತಿ ಕೇಳಿದ ಹೈಕೋರ್ಟ್‌

ಬೆಂಗಳೂರು: ಕರ್ನಾಟದಲ್ಲಿರುವ ವಿವಿಧ ಜೈಲುಗಳಲ್ಲಿ ಇದುವರೆಗೆ ಪತ್ತೆಯಾಗಿರುವ ಕರೊನಾ ವೈರಸ್‌ ಪ್ರಕರಣಗಳ ಕುರಿತು ವಿವರ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ರಾಜ್ಯದ ಕಾರಾಗೃಹಗಳಲ್ಲಿ ಕರೊನಾ ಸೋಂಕು ಇರುವ ಕೈದಿಗಳನ್ನು ಪ್ರತ್ಯೇಕವಾಗಿರಿಸುವಂತೆ ಕೋರಿ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಆರೋಪಿ ಅಮೋಲ್‌ ಕಾಳೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೋರ್ಟ್‌ ನಡೆಸುತ್ತಿದೆ.

ಕರೊನಾ ವೈರಸ್‌ ಲಕ್ಷಣ ಇರುವ ಕೈದಿಗಳನ್ನು ಕಾರಾಗೃಹದಲ್ಲಿ ಪ್ರತ್ಯೇಕವಾಗಿ ಇರಿಸಬೇಕು. ಕೈದಿಗಳನ್ನು ಒಟ್ಟಿಗೇ ಇಡಬಾರದು ಎಂಬುದಾಗಿ ಸುಪ್ರೀಂಕೋರ್ಟ್‌ ಆದೇಶಿಸಿದ್ದು, ಅದನ್ನು ರಾಜ್ಯದಲ್ಲಿಯೂ ಅನುಸರಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಕಾಳೆ ಕೋರಿದ್ದಾರೆ.

ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ. ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಜೈಲಿನಲ್ಲಿ  ಏನೆಲ್ಲಾ ಸೌಲಭ್ಯಗಳು ಇವೆ ಎಂಬ ಬಗ್ಗೆ ಮಾಹಿತಿ ನೀಡಿ ಎಂದು ಸರ್ಕಾರಕ್ಕೆ ಕೋರ್ಟ್‌ ಸೂಚಿಸಿದೆ.

ವಿಚಾರಣೆಗೆ ಒಳಪಡುವ ಅಥವಾ ಶಿಕ್ಷೆಗೆ ಒಳಗಾದ ಕೈದಿಯನ್ನು ಜೈಲಿಗೆ ಕರೆ ತರುವ ಮುನ್ನ ಕರೊನಾ ಪರೀಕ್ಷೆ ನಡೆಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಯಾವುದಾರೂ ನೀತಿ ಇದೆಯೇ ಎಂಬುದರ ಕುರಿತು ಇದೇ 21ರ ಒಳಗೆ ಪ್ರಮಾಣಪತ್ರ ಸಲ್ಲಿಸುವಂತೆ ಕೋರ್ಟ್‌ ಹೇಳಿದೆ.

ಇಲ್ಲಿಯವರೆಗೆ ಕೈದಿಗಳಲ್ಲಿ ಪತ್ತೆಯಾಗಿರುವ ಕರೊನಾ ವೈರಸ್‌ ಪ್ರಕರಣಗಳ ಸಂಖ್ಯೆ ತಿಳಿಸಬೇಕು, ಜೈಲಿನಲ್ಲಿ ಪ್ರತ್ಯೇಕವಾಗಿ ಇರಲು ಸರಿಯಾದ ಸೌಲಭ್ಯಗಳು ಲಭ್ಯವಿದೆಯೇ ಎಂಬ ಮಾಹಿತಿ ನೀಡಬೇಕು, ಜತೆಗೆ, ರೋಗಲಕ್ಷಣಗಳನ್ನು ಹೊಂದಿರುವ ಕೈದಿಗಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗಿದೆಯೇ ಎಂಬುದರ ಕುರಿತು ವಿವರ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಪೀಠ ನಿರ್ದೇಶಿಸಿದೆ.