ನ್ಯೂಸ್

ಪಲ್ಟಿಯಾದ ಲಾರಿ, ರಸ್ತೆ ತುಂಬಾ ಈರುಳ್ಳಿ... ಚಾಲಕ ಮಾತ್ರ ನಿಶ್ಚಿಂತೆ! ಫೋಟೋದಲ್ಲೂ ‘ರಾಗಾ’ನ ಹುಡುಕಿದ್ರು ಕಮೆಂಟಿಗರು!

ಲಖನೌ: ಈರುಳ್ಳಿ ತುಂಬಿದ ಲಾರಿಯೊಂದು ರಸ್ತೆ ಬದಿ ಪಲ್ಟಿ ಹೊಡೆದು ಅದರಲ್ಲಿದ್ದ ಈರುಳ್ಳಿಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದರೆ ಆ ಚಾಲಕನಿಗೆ ಹೇಗಾಗಬೇಡ? ಭಯದಿಂದ, ಲಗುಬಗೆಯಿಂದ, ಈರುಳ್ಳಿಗಳನ್ನು ತುಂಬಿಸಿಕೊಳ್ಳುವಲ್ಲಿ ನಿರತ ಆಗುತ್ತಾನೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರಲ್ಲವೆ?

ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋ ನೋಡಿ, ಲಾರಿ ಚಾಲಕ ಮಾತ್ರ ಪಲ್ಟಿಯಾಗಿರುವ ಲಾರಿಯ ಸಮೀಪವೇ ಮಲಗಿ ನಿಶ್ಚಿಂತೆಯಿಂದ ಖುಷಿಯಲ್ಲಿ ಯಾರಿಗೋ ಫೋನ್‌ ಮಾಡುತ್ತಿದ್ದಾನೆ! ಇದನ್ನು ನೋಡಿರುವ ಟ್ವಿಟ್ಟಿಗರೊಬ್ಬರು ಫೋಟೋ ತೆಗೆದು ಶೇರ್‌ ಮಾಡಿಕೊಂಡಿದ್ದಾರೆ.

ಐಪಿಎಸ್​ ಅಧಿಕಾರಿ ಅರುಣ್​ ಬೇಥರಾ ಶೇರ್​ ಮಾಡಿರುವ ಈ ಟ್ವಿಟರ್‌ ಇದೀಗ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕಮೆಂಟ್‌ಗಳ ಜತೆ ವೈರಲ್‌ ಆಗಿದೆ. ಅರುಣ್‌ ಅವರು, ಈ ಫೋಟೋ ನೋಡಿದರೆ ಆ ಚಾಲಕ ಯಾರ ಜತೆ ಮಾತನಾಡುತ್ತಾ ಇರಬಹುದು ಎಂದು ಊಹಿಸುವುದೇನೂ ಕಷ್ಟವಲ್ಲ ಎಂದು ತಮಾಷೆ ಮಾಡಿದ್ದಾರೆ. ಏಕೆಂದರೆ ಯುವಕನಾಗಿರುವ ಚಾಲಕ ನಿಶ್ಚಿಂತೆಯಿಂದ ಖುಷಿಖುಷಿಯಿಂದ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ನೋಡಿದಾಗ ಅತ್ತ ಕಡೆ ಯಾರು ಇರಬಹುದು ಎಂದು ಎಲ್ಲರೂ ಊಹಿಸಬಹುದು ಎನ್ನುವುದು ಅವರ ಮಾತು.

ಆದರೆ ಈ ಟ್ವಿಟರ್‌ಗೆ ಕಮೆಂಟ್‌ ಹಾಕಿರುವವರು ಮಾತ್ರ ಬೇರೆಯದ್ದೇ ವರ್ಣನೆ ಮಾಡಿದ್ದಾರೆ! ದಿನನಿತ್ಯವೂ ಟ್ರೋಪ್‌ ಪುಟದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಈ ಫೋಟೋಗೆ ಲಿಂಕ್‌ ಮಾಡಿದ್ದಾರೆ ಕೆಲವರು. ಉಲ್ಟಾ ಆಗಿರುವ ಲಾರಿ ಕಾಂಗ್ರೆಸ್‌ ಅಂತೆ, ನಿಶ್ಚಿಂತೆಯಿಂದ ಮಾತನಾಡುತ್ತಿರುವವರು ’ರಾಗಾ’ ಎಂದು ಬರೆದು ಇನ್ನಷ್ಟು ಟ್ರೋಲ್‌ ಮಾಡುತ್ತಿದ್ದಾರೆ. ಅಸಲಿ ಫೋಟೋಗಿಂದ ಈ ಟ್ರೋಲ್‌ ಮಾಡಿರುವ ಫೋಟೋವೇ ಹೆಚ್ಚು ವೈರಲ್‌ ಆಗುತ್ತಿರುವುದು ಸೋಜಿಗ!