ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ, ಕನ್ನಡ ನಾಡಿನ ಕಣ್ಮಣಿಗಳು ಎಂದೇ ಬಿಂಬಿತರಾದವರು ಡಾ.ರಾಜ್ಕುಮಾರ್ ಹಾಗೂ ಅವರ ಪುತ್ರ ಪುನೀತ್ ರಾಜ್‌ಕುಮಾರ್. ಈಗ ಇಬ್ಬರೂ ಇನ್ನಿಲ್ಲ. ಆದರೆ ಅವರ ನೆನಪು ಮಾತ್ರ ಅವರ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಸದಾ ಹಚ್ಚಹಸಿರಾಗಿಯೇ ಇರುತ್ತದೆ.
ಕಳೆದ ವಾರ ಪುನೀತ್ ಅವರನ್ನು ಕಳೆದುಕೊಂಡ ಮೇಲೆ ಅವರಿಗೆ ಅವರ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವಿಶೇಷವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಇದೀಗ ಚಿತ್ರಕಲಾವಿದನೊಬ್ಬ ರಚಿಸಿರುವ ಚಿತ್ರ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ವರ್ಗದಲ್ಲಿರುವ ಅಪ್ಪ-ಮಗನ ಸುಂದರ ಹೃದಯಸ್ಪರ್ಶಿ ಪೇಂಟಿಂಗ್ ಇದಾಗಿದೆ.
ಬಿಳಿ ಮೋಡಗಳ ನಡುವೆ ಡಾ.ರಾಜ್‌ಕುಮಾರ್ ಅವರ ಕಣ್ಣನ್ನು ಹಿಂದಿನಿಂದ ಮುಚ್ಚಿರುವ ಪುನೀತ್, ನಾನು ಯಾರು ಹೇಳು ಎಂದು ಕೇಳುತ್ತಿದ್ದರೆ ಅವರ ಸುತ್ತಲೂ ಪಾರಿವಾಳಗಳು ಸ್ವಚ್ಛಂದವಾಗಿ ಹಾರಾಡುತ್ತಿರುವ ಚಿತ್ರ ಇದಾಗಿದೆ.
ಡಾ.ರಾಜ್ಕುಮಾರ್ ಹಾಗೂ ಪುನೀತ್‍ರಾಜ್‍ಕುಮಾರ್ ಅವರು ಸ್ವರ್ಗದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವಂತೆ ಭಾಸವಾಗುತ್ತಿರುವ ಸುಂದರ ಚಿತ್ರ ಇದಾಗಿದೆ. ಕನ್ನಡ ಸಿನಿಮಾರಂಗದಲ್ಲಿ ಫೋಸ್ಟರ್ ಡಿಸೈನರ್ ಆಗಿರುವ ಕರಣ್ ಆಚಾರ್ಯ ಅವರು ತಮ್ಮ ಕಲ್ಪನಾ ಲಹರಿಯಲ್ಲಿ ಇಂಥದ್ದೊಂದು ಸುಂದರ ಚಿತ್ರ ತಯಾರಿಸಿದ್ದಾರೆ.