ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಸ್ಕೆಚ್ ರೂಪಿಸಿರುವುದಷ್ಟೇ ಅಲ್ಲದೇ, ಭಾರತದಲ್ಲಿ ಹಲವಾರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇಡೀ ರಾಷ್ಟ್ರವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಸಂಚುರೂಪಿಸುವ ಆರೋಪ ಹೊತ್ತ ಉಗ್ರ ಸಂಘಟನೆ ಪಿಎಫ್‌ಐ ಜತೆ ಇನ್ನೂ ಎಂಟು ಸಂಘಟನೆಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.
ಭಾರತವನ್ನು ಉಗ್ರರ ತಾಣವನ್ನಾಗಿಸಿ ಮಾಡಿ ರಕ್ತಪಾತ ಹರಿಸಲು ಹವಣಿಸುತ್ತಿರುವ ಈ ಸಂಘಟನೆಗಳನ್ನು ನಿಷೇಧಿಸಿರುವುದಾಗಿ ಭಾರತೀಯರೆಲ್ಲರೂ ಸಂತೋಷ ವ್ಯಕ್ತಪಡಿಸುತ್ತಿದ್ದರೆ, ಕಾಂಗ್ರೆಸ್ನ ಕೆಲವು ನಾಯಕರು ಈ ಬಗ್ಗೆ ಗಪ್ಚುಪ್ ಆಗಿದ್ದು, ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಇದರ ಬೆನ್ನಲ್ಲೇ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ನೀಡಿರುವ ಹೇಳಿಕೆ ಮಾತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಕೋಮುವಾದ, ಉಗ್ರವಾದದ ಹೆಸರಿನಲ್ಲಿ ಪಿಎಫ್‌ಐ ನಿಷೇಧ ಮಾಡಲಾಗಿದೆ. ಆದರೆ ಪಿಎಫ್‌ಐ ಹಾಗೂ ಕೆಲವು ಉಗ್ರ ಸಂಘಟನೆಗಳನ್ನು ನಿಷೇಧ ಮಾಡುವುದು ಎಲ್ಲದಕ್ಕೂ ಪರಿಹಾರವಲ್ಲ ಎಂದಿರುವ ಸುರೇಶ್, ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕಿದೆ ಎಂದಿದ್ದಾರೆ. ಇದಕ್ಕೆ ಅವರು ಕೊಟ್ಟಿರುವ ಕಾರಣ, ಆರ್‌ಎಸ್‌ಎಸ್ ಕೂಡ ದೇಶಾದ್ಯಂತ ಹಿಂದೂ ಕೋಮುವಾದವನ್ನು ಹರಡುತ್ತಿದೆ. ಆದ್ದರಿಂದ ಆರ್‌ಎಸ್‌ಎಸ್ ಮತ್ತು ಪಿಎಫ್‌ಐ ಎರಡೂ ಒಂದೇ ಸಮಾನವಾದದ್ದು, ಪಿಎಫ್‌ಐ ಮಾತ್ರ ನಿಷೇಧಿಸಿ ಆರ್‌ಎಸ್‌ಎಸ್ ಬಿಡುವುದು ಸರಿಯಲ್ಲ ಎಂದಿದ್ದಾರೆ.
ಇದೇ ವೇಳೆ ಎಂ.ಕೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಷ್ಟ್ರೀಯ ಅಧ್ಯಕ್ಷ ಫೈಜಿ, ಬಿಜೆಪಿ ಸರ್ಕಾರದ ನಿರ್ಧಾರವು ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜನರ ಹಕ್ಕುಗಳ ಮೇಲೆ ನೇರವಾದ ಹೊಡೆತವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್)