ಸಾಂದರ್ಭಿಕ ಚಿತ್ರ 
ನ್ಯೂಸ್

ಗ್ಯಾಂಗ್‌ರೇಪ್‌ ಮಾಡಿ ಬೆತ್ತಲೆ ಮೆರವಣಿಗೆ ನಡೆಸಿದ್ದಕ್ಕೆ ಕೊನೆಗೂ ಬಯಲಾಯ್ತು ಕಾರಣ! ತಂಗಿಯನ್ನೂ ಬಿಡದ ಕಾಮುಕರು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಯುವತಿಯ ಗ್ಯಾಂಗ್‌ರೇಪ್‌ ಪ್ರಕರಣ ಭಾರಿ ಸುದ್ದಿ ಮಾಡಿತ್ತು. ಯುವತಿಯ ಗ್ಯಾಂಗ್‌ರೇಪ್‌ ಮಾಡಿ ಆಕೆಯ ಮುಖಕ್ಕೆ ಮಸಿ ಬಳಿದು, ಚಪ್ಪಲಿ ಹಾರ ಹಾಕಿ ಖುದ್ದು ಮಹಿಳೆಯರೇ ಮೆರವಣಿಗೆ ಮಾಡಿ ಕೇಕೆ ಹಾಕಿರುವ ಅತ್ಯಂತ ಅಮಾನವೀಯ ಘಟನೆ ನಡೆದಿತ್ತು.

ಪೂರ್ವ ದೆಹಲಿಯ ಶಹದಾರಾದಲ್ಲಿ ಈ ಘಟನೆ ನಡೆದಿತ್ತು. ಇದರ ಅಸಲಿ ಕಾರಣವೀಗ ಬಯಲಾಗಿದೆ. ಅದೇನೆಂದರೆ ನಗರದಲ್ಲಿ ವಾಸಿಸುತ್ತಿದ್ದ ಯುವಕನೊಬ್ಬ ಪ್ರಪೋಸ್​ ಮಾಡಿದ್ದನು. ಆದ್ರೆ ಆ ಯುವಕನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಳು. ಇದರಿಂದ ನೊಂದುಕೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ.

ಯುವಕನ ಸಾವಿಗೆ ಇವಳೇ ಕಾರಣ ಎಂದು ಆರೋಪಿಸಿದ ಕುಟುಂಬಸ್ಥರು ಯುವತಿಯನ್ನು ಅಪಹರಿಸಿ ಗ್ಯಾಂಗ್‌ರೇಪ್‌ ಮಾಡಿದ್ದರು. ನಂತರ ಯುವತಿಯನ್ನು ಬೆತ್ತಲೆಯಾಗಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದರು. ಇದಾದ ಕೆಲವು ದಿನಗಳ ಮುನ್ನ ಆಕೆಯ ಕಿರಿಯ ಸಹೋದರಿಯ ಮೇಲೂ ಹಲ್ಲೆ ನಡೆಸಿದ್ದರು ಎಂಬುದಾಗಿ ತಿಳಿದುಬಂದಿದೆ.

ಸಂತ್ರಸ್ತೆಯ 18 ವರ್ಷದ ಕಿರಿಯ ಸಹೋದರಿಯ ದೂರಿನ ಮೇರೆಗೆ ಪೊಲೀಸರು ಈಗಾಗಲೇ ಬಂಧಿತರಾಗಿರುವ ಎಂಟು ಮಹಿಳೆಯರು, ಒಬ್ಬ ಪುರುಷ ಮತ್ತು ಮೂವರು ಅಪ್ರಾಪ್ತರು ಸೇರಿದಂತೆ ಯುವತಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ.

ಇನ್ನೂ ಶಾಕಿಂಗ್‌ ಸುದ್ದಿಯೆಂದರೆ ಯುವಕ ಸತ್ತ ಬಳಿಕ ಇವರೆಲ್ಲರೂ ಸೇರಿ ತನಗೂ ಇದೇ ರೀತಿ ಕಿರುಕುಳ ನೀಡಿ, ಥಳಿಸಿದ್ದಾರೆ ಎಂದು ಸಂತ್ರಸ್ತೆಯ ತಂಗಿ ದೂರಿನಲ್ಲಿ ತಿಳಿಸಿದ್ದಾಳೆ. ತನ್ನ ಮೇಲೆ ಹಲ್ಲೆ ನಡೆಸಿ ಥಳಿಸಿದ್ದು, ಆಟೋಕ್ಕೂ ಬೆಂಕಿ ಹಚ್ಚಿದ್ದಾರೆ. ನಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಜಗಳವಾಡಿದರು. ಇದರಿಂದಾಗಿ ನಾನು ಕೆಲಸ ಬಿಡಬೇಕಾಯಿತು ಎಂದು ಕಿರಿಯ ಸಹೋದರಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.