ತಿರುವನಂತಪುರ: ಆನ್‌ಲೈನ್‌ನಲ್ಲಿ ಒಂದು ಆರ್ಡರ್ ಮಾಡಿದಾಗ ಇನ್ನೊಂದು ಬಂದಿರುವ ವಿಷಯಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅದೇ ರೀತಿ ಸೈಬರ್ ವಂಚನೆ ಪ್ರಕರಣಗಳು ಕೂಡ. ಅಂಥದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಆದರೆ ಇದು ಸ್ವಲ್ಪ ವಿಭಿನ್ನ ಪ್ರಕರಣವೂ ಹೌದು.
ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಅಲುವಾ ನಿವಾಸಿಯಾಗಿರುವ ನೂರುಲ್ ಅಮೀನ್ ಎನ್ನುವವರು ಆ್ಯಪ್ಪಲ್ ಐ ಫೋನ್ ಆರ್ಡರ್ ಮಾಡಿದ್ದರು. ಫೋನ್ ಬರುವ ಖುಷಿಯಲ್ಲಿ ಅವರು ಇದ್ದರು. ಇದಕ್ಕಾಗಿ 70,900 ರೂಪಾಯಿಗಳನ್ನು ಪಾವತಿ ಕೂಡ ಮಾಡಿದ್ದರು. ಫೋನ್ ಬರುವ ದಿನ ಬಂದೇಬಿಟ್ಟಿತು. ಪಾರ್ಸೆಲ್ ಕೂಡ ಕೈಸೇರಿತು.
ಆದರೆ ಪಾರ್ಸೆಲ್ ಬಿಡಿಸಿ ನೋಡಿದಾಗ ಅದರಲ್ಲಿ ಇದ್ದುದು ಪಾತ್ರೆ ತೊಳೆಯುವ ಸೋಪು ಮತ್ತು 5 ರೂ. ನಾಣ್ಯ! ಇದನ್ನು ನೋಡಿ ಶಾಕ್ ಆಗಿರುವ ನೂರುಲ್, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಸಿರು ಬಣ್ಣದ ವಿಮ್ ಡಿಶ್ ವಾಶ್ ಸೋಪ್ ಮತ್ತು 5 ರೂ. ನಾಣ್ಯ ತಮಗೆ ಬಂದಿರುವುದಾಗಿ ಅವರು ಹೇಳಿದ್ದಾರೆ.
ಕೂಡಲೇ ಅವರು ದೂರು ದಾಖಲಿಸಿದ್ದಾರೆ. ನಂತರ ವಿಚಾರಣೆ ನಡೆಸಿದ ಪೊಲೀಸರು ಅವರ ಹಣವನ್ನು ಅವರಿಗೆ ವಾಪಸ್ ಕೊಡಿಸಿದ್ದಾರೆ. ಆದರೆ ಈ ಪ್ರಕರಣ ವಿಭಿನ್ನವಾಗಲು ಕಾರಣವೆಂದರೆ, ಮೊದಲಿಗೆ ಇದು ಅಚಾನಕ್ ಆಗಿರುವ ಎಡವಟ್ಟು ಎಂದುಕೊಳ್ಳಲಾಗಿತ್ತು. ಆದರೆ ಪೊಲೀಸರು ತನಿಖೆ ಮಾಡಿದಾಗ ಇವರಿಗೆ ಬರಬೇಕಿದ್ದ ಐಫೋನ್ ಜಾರ್ಖಂಡ್‌ನಲ್ಲಿ ಇನ್ನಾರದ್ದೋ ಕೈಯಲ್ಲಿ ಇರುವುದು ಫೋನ್‌ನಲ್ಲಿರುವ ಐಎಂಇಐ ಸಂಖ್ಯೆಯಿಂದ ಪತ್ತೆಯಾಗಿದೆ. ಇದು ಹೇಗೆ ಸಾಧ್ಯ ಎಂಬ ಬಗ್ಗೆ ಇದೀಗ ತನಿಖೆ ಶುರುವಾಗಿದೆ.