ನ್ಯೂಸ್

ಸಾಕು ಮಗಳಿಗೆ ಆಸ್ತಿಯಲ್ಲಿ ಹಕ್ಕು ಇದೆಯೆ- ಕಾನೂನು ಏನು ಹೇಳುತ್ತದೆ?

suchetana

ನಾವು ಹಿಂದೂ ಧರ್ಮದವರು. ನಾನು ಮೂರು ಹೆಣ್ಣು ಮಕ್ಕಳ ತಂದೆ. ನನಗೆ ನರಗಳ ದೌರ್ಬಲ್ಯವಿದೆ. ಬಹಳ ಕಷ್ಟದಿಂದ ಜೀವ ಸಾಗಿಸುತ್ತಿದ್ದೇವೆ. ನನ್ನ ಹೆಂಡತಿಯನ್ನು ಸಾಕಿದವರು ಬಹಳ ಶ್ರೀಮಂತರು. ಅವರೇ ನಿಂತು ನಮ್ಮ ಮದುವೆ ಮಾಡಿದ್ದರು. ಹೆಚ್ಚು ಕಡಿಮೆ ಎಲ್ಲ ಕಷ್ಟ ಸುಖ ನೋಡುತ್ತಿದ್ದರು. ಈಗ ಐದು ವರ್ಷಗಳಿಂದ ನಮಗೆ ಆಸ್ತಿ ಕೊಡಿ ಎಂದು ಕೇಳಿದ್ದಕ್ಕೆ ಕೋಪ ಮಾಡಿಕೊಂಡು ನಮ್ಮನ್ನು ದೂರ ಇಟ್ಟಿದ್ದಾರೆ. ಆಸ್ತಿಯನ್ನೆಲ್ಲಾ ನನ್ನ ಹೆಂಡತಿಯ ಸಾಕು ತಂದೆಯ ತಮ್ಮನ , ಮತ್ತು ಅಣ್ಣನ ಮಕ್ಕಳು ಅವರನ್ನು ನಂಬಿಸಿ ಮೋಸ ಮಾಡಿ ವಿಲ್ ಮತ್ತು ದಾನ ಪತ್ರ ಮಾಡಿಸಿಕೊಂಡಿದ್ದಾರೆ ಎಂದು ತಿಳಿಯಿತು. ಈಗ ನನ್ನ ಹೆಂಡತಿ ಕೇಸು ಹಾಕಿ ಇಂಜಕ್ಷನ್ ಪಡೆಯಬಹುದೇ? ನನ್ನ ಹೆಂಡತಿಗೇ ಎಲ್ಲ ಆಸ್ತಿ ಸೇರಬೇಕೆಂದು ಆದೇಶ ಪಡೆಯಬಹುದೇ? ನಾವು ಬೇಕಿದ್ದರೆ ನನ್ನ ಹೆಂಡತಿಯ ತಂದೆ ತಾಯಿಯನ್ನು ಸಾಕಿ ಸಲಹಿ ಪೋಷಣೆ ಮಾಡುತ್ತೇವೆ. ಈಗ ಆಸ್ತಿಗೋಸ್ಕರ ನಾವು ಏನು ಮಾಡಬೇಕೆಂದು ತಿಳಿಸಿ.

ಉತ್ತರ: ಸಾಕು ಮಗಳಿಗೆ ಅಥವಾ ಸಾಕು ಮಗನಿಗೆ ತಂದೆ ತಾಯಿಯ ಆಸ್ತಿಯಲ್ಲಿ ತಂದೆ ತಾಯಿ ಬದುಕಿರುವಾಗ ಅಥವಾ ತಂದೆ ತಾಯಿ ತೀರಿಕೊಂಡಾಗ ಯಾವ ಹಕ್ಕೂ ಇರುವುದಿಲ್ಲ. ದತ್ತು ಪುತ್ರಿ ಅಥವಾ ದತ್ತು ಪುತ್ರನಾಗಿದ್ದರೆ ಕಾನೂನು ಬೇರೆ.

ನಿಮ್ಮ ಪತ್ನಿಗೆ ಯಾವುದೇ ರೀತಿಯಲ್ಲೂ ಆಕೆಯ ಸಾಕು ತಂದೆ ತಾಯಿಯ ಆಸ್ತಿಯಲ್ಲಿ ಯಾವುದೇ ಹಕ್ಕೂ ಬರುವುದಿಲ್ಲ. ನಿಮ್ಮ ಪತ್ನಿಯ ಸಾಕು ತಂದೆ ತಾಯಿ ತೀರಿಕೊಂಡ ಮೇಲೂ ನಿಮ್ಮ ಪತ್ನಿಗೆ ಆಸ್ತಿಯಲ್ಲಿ ಹಕ್ಕು ಬರುವುದಿಲ್ಲ. ಒಂದು ವೇಳೆ ವಿಲ್ ಅಥವಾ ದಾನ ಪತ್ರ ಸಕ್ರಮವಾಗಿಲ್ಲ ಎಂದು ನ್ಯಾಯಾಲಯದಲ್ಲಿ ತೀರ್ಮಾನ ಆದರೂ , ಆಗಲೂ ನಿಮ್ಮ ಪತ್ನಿ ಸಾಕು ಮಗಳಾಗಿರುವುದರಿಂದ ಆಕೆಗೆ ಹಕ್ಕು ಬರುವುದಿಲ್ಲ.

ನಿಮ್ಮ ಪತ್ನಿಯ ಸಾಕು ತಂದೆ ತಾಯಿಗಳ ಸಂಬಂಧಿಗಳಿಗೆ, ಹಿಂದೂ ವಾರಸಾ ಕಾಯ್ದೆಯಂತೆ ಆಸ್ತಿ ಹಂಚಿಕೆ ಆಗುತ್ತದೆ. ನೀವು ನಿಮ್ಮ ಪತ್ನಿಯ ಸಾಕು ತಂದೆ ತಾಯಿಯರನ್ನು ಪೋಷಣೆ ಮಾಡಿದರೂ ಮಾಡದೇ ಇದ್ದರೂ ನಿಮ್ಮ ಪತ್ನಿಗೆ ಅವರ ಆಸ್ತಿಯಲ್ಲಿ ಭಾಗ ಬರುವುದಿಲ್ಲ.

ತಾವು ಆಸ್ತಿ ಕೇಳಿ ವಿಶ್ವಾಸ ಕಳೆದುಕೊಂಡಿದ್ದೀರಿ. ಈಗಲೂ ಅವರ ಪ್ರೀತಿ ವಿಶ್ವಾಸ ಗಳಿಸಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಅವರೇ ಮನಸ್ಸು ಬದಲಾಯಿಸಿ ಏನಾದರೂ ಕೊಟ್ಟರೆ ಅದು ನಿಮ್ಮ ಅದೃಷ್ಟ. ಕೇಸು ಹಾಕಿ ಪ್ರಯೋಜನವಿಲ್ಲ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.
https://youtu.be/fu4GVbqQSX4