ನ್ಯೂಸ್

2ನೇ ಬಾರಿಯೂ ಬಿಜೆಪಿ ಜತೆ ಮೈತ್ರಿ ಕಟ್​! ಬಿಹಾರದ ಮುಂದಿನ ಸಿಎಂ ಯಾರು? ರಾಜಕೀಯ ಲೆಕ್ಕಾಚಾರವೇನು?

ಪಟ್ನಾ: ಬಿಜೆಪಿ ಜತೆಗಿನ ಕೆಲವೊಂದು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್-ಜೆಡಿಯು) ಬಿಜೆಪಿಯಿಂದ ಬೇರ್ಪಟ್ಟಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್​ ಕುಮಾರ್​ ರಾಜೀನಾಮೆ ನೀಡಿದ್ದಾರೆ. ಈಗ ಬಿಹಾರದ ರಾಜಕೀಯದ ಲೆಕ್ಕಾಚಾರವೇನು ಎಂಬ ಬಗ್ಗೆ ಚರ್ಚೆ ಶುರುವಾಗಿದೆ, ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಈಗ ಕುತೂಹಲದ ವಿಷಯವಾಗಿದೆ.

ಅಂದಹಾಗೆ, ಜೆಡಿಯು, ಬಿಜೆಪಿ ಜತೆಗೆ ಮೈತ್ರಿ ಮುರಿದುಕೊಂಡಿರುವುದು ಇದೇ ಮೊದಲೇನಲ್ಲ. 2015 ರಲ್ಲಿ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿಯಿಂದ ಬೇರ್ಪಟ್ಟಿತ್ತು. ಆಗ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮತ್ತು ಕಾಂಗ್ರೆಸ್ ಜತೆ ಕೈಜೋಡಿಸಿತ್ತು. 2015 ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್ 'ಮಹಾಘಟಬಂಧನ್' ಜಯಗಳಿಸಿತು, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಅವರ ಉಪನಾಯಕರಾಗಿ ಮರಳಿದ್ದರು.

ಆದರೆ, ನಿತೀಶ್ ಕುಮಾರ್ 2017ರಲ್ಲಿ ಮಹಾಘಟಬಂಧನ್ ಸರ್ಕಾರವನ್ನು ಉರುಳಿಸಿ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದರು. ಆದರೆ ಮತ್ತೆ ಈ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಮತ್ತೆ ಮೈತ್ರಿ ಮುರಿದಿದೆ. ಬಿಜೆಪಿ ಜತೆಗಿನ ಮೈತ್ರಿ ಕೊನೆಗೊಳಿಸಿ ಆರ್‌ಜೆಡಿ ಹಾಗೂ ಇತರ ಪ್ರತಿಪಕ್ಷಗಳ ಜತೆ ಕೈಜೋಡಿಸಿದರೆ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಈಗಿರುವ ಪ್ರಶ್ನೆ.

ಸದ್ಯದ ಲೆಕ್ಕಾಚಾರ ಹೇಳುವುದಾದರೆ, ನಿತೀಶ್ ಕುಮಾರ್ ಬಳಿ 45 ಶಾಸಕರ ಬಲವಿದೆ. ಆರ್‌ಜೆಡಿ ಅತಿದೊಡ್ಡ ಪಕ್ಷವಾಗಿದ್ದು 79 ಶಾಸಕರನ್ನು ಹೊಂದಿದೆ. ಈ ಮೂಲಕ ಆರ್​ಜೆಡಿ ಬಿಹಾರ ವಿಧಾನಸಭೆಯಲ್ಲೇ ಅತ್ಯಂತ ದೊಡ್ಡ ಪಕ್ಷ ಎನಿಸಿದೆ. ಎರಡೂ ಪಕ್ಷಗಳು ಒಟ್ಟಾದರೆ 124 ಶಾಸಕರ ಬಲ ಆ ಮೈತ್ರಿಗೆ ದೊರೆಯಲಿದೆ. ಸಂಖ್ಯಾಬಲದ ಹೊರತಾಗಿಯೂ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದ ತನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಜೆಡಿ(ಯು) ಇದಾಗಲೇ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವಂತೆ ಆರ್‌ಜೆಡಿ ಬೆಂಬಲ ಸೂಚಿಸಬಹುದು ಎನ್ನಲಾಗಿದೆ.

ಇನ್ನು ಕಾಂಗ್ರೆಸ್‌ (19 ಶಾಸಕರು) ಮತ್ತು ಎಡಪಕ್ಷಗಳು (16 ಶಾಸಕರು) ಸಹ ಬೆಂಬಲ ನೀಡುವುದಾಗಿ ಹೇಳಿವೆ. ಉಳಿದಂತೆ ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ 74 ಶಾಸಕರನ್ನು ಒಳಗೊಂಡಿದೆ.

ನಿತೀಶ್ ಕುಮಾರ್ ರಾಜಕೀಯದಲ್ಲಿ ಶಾಶ್ವತ ಮಿತ್ರರು ಅಥವಾ ಶತ್ರುಗಳಿಲ್ಲದ ನಾಯಕ. 2024ರಲ್ಲಿ ಪ್ರಧಾನಿ ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಹೊರಹೊಮ್ಮುವ ಸಿದ್ಧಾಂತವೂ ಅವರಲ್ಲಿ ಇದೆ. (ಏಜೆನ್ಸೀಸ್​)