ನ್ಯೂಸ್

ಇಂದು ನಡೆಯಬೇಕಿದ್ದ ನೀಟ್​-ಪಿಜಿ ಕೌನ್ಸೆಲಿಂಗ್​​ ಮುಂದೂಡಿಕೆ: ಆರೋಗ್ಯ ಸಚಿವಾಲಯದ ಮಾಹಿತಿ

suchetana

ನವದೆಹಲಿ: ಇಂದಿನಿಂದ (ಸೆ.1) ಪ್ರಾರಂಭವಾಗಬೇಕಿದ್ದ ನೀಟ್​-ಪಿಜಿ (ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ) ಕೌನ್ಸೆಲಿಂಗ್ ಅನ್ನು ಮುಂದೂಡಲಾಗಿದೆ. ಇದೇ 19ರಂದು ಇದು ಪ್ರಾರಂಭವಾಗುವ ಸಾಧ್ಯತೆ ಇದ್ದು, ಶೀಘ್ರವೇ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಲಿದೆ.

ಹೊಸ ಸೀಟುಗಳನ್ನು ಸೇರಿಸುವ ಪ್ರಕ್ರಿಯೆ ಪೂರ್ಣಗೊಳಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಅನುಮತಿ ನೀಡುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಹೊಸ ಅನುಮತಿ ಪತ್ರಗಳನ್ನು (ಎಲ್‌ಒಪಿ) ನೀಡುವ ಪ್ರಕ್ರಿಯೆ ಸೆಪ್ಟೆಂಬರ್ 15 ರವರೆಗೆ ಇರಲಿದೆ. ಆದ್ದರಿಂದ, ಕೌನ್ಸೆಲಿಂಗ್‌ನಲ್ಲಿ ಹೆಚ್ಚಿನ ಸೀಟುಗಳನ್ನು ಸೇರಿಸುವ ಸಲುವಾಗಿ ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಬೇಕಿದ್ದ ಕೌನ್ಸೆಲಿಂಗ್ ಅನ್ನು ಮುಂದೂಡಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ.

ಕೌನ್ಸೆಲಿಂಗ್ ಪ್ರಕ್ರಿಯೆ: ಈ ವರ್ಷ ಸುಮಾರು 60 ಸಾವಿರ ಅಭ್ಯರ್ಥಿಗಳಿಗೆ ಸೀಟು ಸಿಗುವ ಸಾಧ್ಯತೆ ಇದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಅಖಿಲ ಭಾರತ ಕೋಟಾದ ಸೀಟುಗಳು, ರಾಜ್ಯ ವೈದ್ಯಕೀಯ ಮತ್ತು ದಂತ ಕಾಲೇಜುಗಳು, ಕೇಂದ್ರೀಯ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು ಅಖಿಲ ಭಾರತ ಕೋಟಾದ 50 ಪ್ರತಿಶತ ಹಾಗೂ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳ ರಾಜ್ಯ ಕೋಟಾದ 50 ಪ್ರತಿಶತಕ್ಕೆ ಏಕಕಾಲದಲ್ಲಿ ಕೌನ್ಸೆಲಿಂಗ್ ಪ್ರಾರಂಭವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)