ಕೆ.ಆರ್.ನಗರ: ಸರಳ ಮತ್ತು ಸಜ್ಜನ ರಾಜಕಾರಣಿಯಾಗಿದ್ದ ಮಾಜಿ ಸಚಿವ ದಿ.ಎಸ್.ನಂಜಪ್ಪ ಅವರು ಇಂದಿನ ಎಲ್ಲ ರಾಜಕಾರಣಿಗಳಿಗೂ ಮಾದರಿ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಸಚಿವ ಎಸ್.ನಂಜಪ್ಪ ಅವರ 6ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್.ನಂಜಪ್ಪ ಅವರಂತಹ ರಾಜಕೀಯ ನಾಯಕರು ಸಿಗುವುದು ಬಹಳ ಅಪರೂಪವಾಗಿದ್ದು, ಅವರು ನಮ್ಮ ತಾಲೂಕಿನವರು ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ. ನನ್ನ ಅಧಿಕಾರದ ಅವಧಿಯಲ್ಲಿ ಅವರ ಕನಸುಗಳನ್ನು ಸಾಕಾರ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ ಎಂದರು.
ನೇರ ನಡೆ, ನುಡಿಗೆ ಹೆಸರಾಗಿದ್ದ ಅವರು ಎಂದೂ ಅಧಿಕಾರದ ಹಿಂದೆ ಹೋದವರಲ್ಲ. ಜನತೆ ತಮಗೆ ನೀಡಿದ ರಾಜಕೀಯ ಅಧಿಕಾರವನ್ನು ಸ್ವಂತಕ್ಕೆ ಬಳಕೆ ಮಾಡಿಕೊಳ್ಳದೆ ಸಮಾಜದ ಪರವಾಗಿ ಕೆಲಸ ಮಾಡಿದ ಸಹೃದಯರು ಎಂದು ಬಣ್ಣಿಸಿದರು.
ರೋಗಿಗಳಿಗೆ ಹಣ್ಣು ವಿತರಣೆ: ನಂಜಪ್ಪನವರ ಅಭಿಮಾನಿ ಬಳಗ, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ಎಸ್‌ಎಸ್ ಪಬ್ಲಿಕ್ ಸ್ಕೂಲ್, ಉದಯ ರವಿ ಚಿಟ್ಸ್, ಉದಯರವಿ ಗೃಹ ನಿರ್ಮಾಣ ಸಂಘ ಮತ್ತು ಭಾಗಿರಥಿ ಮಹಿಳಾ ಪತ್ತಿನ ಸಂಘಗಳ ಸಂಯುಕ್ತಾಶ್ರಯದಲ್ಲಿ ಬೆಳಗ್ಗೆ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ವಿತರಣೆ ಮಾಡಲಾಯಿತು.
ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯದಲ್ಲಿ ಕುಟುಂಬದವರಿಂದ ವಿಶೇಷ ಪೂಜೆ ನಡೆಯಿತು. ನಂತರ ಮಧ್ಯಾಹ್ನ 12.30ಕ್ಕೆ ಟಿಎಪಿಸಿಎಂಎಸ್ ರೈತ ಭವನದಲ್ಲಿ ನಂಜಪ್ಪ ಅವರ ಭಾವಚಿತ್ರಕ್ಕೆ ಅಭಿಮಾನಿಗಳು ಪುಷ್ಪನಮನ ಸಲ್ಲಿಸಿದರು. ನಂತರ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ನಂಜಪ್ಪ ಅವರ ಪತ್ನಿ ಲಲಿತಮ್ಮ, ಪುತ್ರರಾದ ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಕೆ.ಎನ್.ದಿನೇಶ್, ಮಾಜಿ ಸಚಿವ ಎಚ್.ವಿಶ್ವನಾಥ್, ಜಿ.ಪಂ ಸದಸ್ಯ ಡಿ.ರವಿಶಂಕರ್, ಮಾಜಿ ಸದಸ್ಯ ಎಂ.ಟಿ.ಕುಮಾರ್, ಕಸಪಾ ಅಧ್ಯಕ್ಷ ಡಿಂಡಿಮಶಂಕರ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ನವನಗರ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸಿ.ಸುರೇಶ್, ನಿರ್ದೇಶಕರಾದ ಕೇಶವ್, ಮಹದೇವ್ ಭಾಗವಹಿಸಿದ್ದರು.