ಲಖನೌ: ಭಾರತೀಯ ಸಂಪ್ರದಾಯಕ್ಕೆ ಮೊರೆ ಹೋಗುವವರು ಅಸಂಖ್ಯ. ಅದರಲ್ಲಿಯೂ ಇಲ್ಲಿಯ ವಿವಾಹ ಪದ್ಧತಿ ಜಗತ್ತಿನಾದ್ಯಂತ ವಿಶೇಷತೆಯನ್ನು ಗಳಿಸಿದೆ. ಇದೇ ಕಾರಣಕ್ಕೆ ಭಾರತೀಯ ಸಂಪ್ರದಾಯದಂತೆ ಮದುವೆಯಾಗಲು ಭಾರತ ಪ್ರವಾಸಕ್ಕೆ ಬಂದಿದ್ದ ಅಮೆರಿಕದ ಮುಸ್ಲಿಂ ದಂಪತಿ ಇಲ್ಲಿಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.
ಅವರು ಇಲ್ಲಿ ಮದುವೆಯಾಗಿದ್ದರೆ ಅದರಲ್ಲೇನೂ ವಿಶೇಷತೆ ಇರುತ್ತಿರಲಿಲ್ಲ. ಬದಲಿಗೆ ಈ ದಂಪತಿ ಒಂಬತ್ತು ಮಕ್ಕಳ ಅಪ್ಪ-ಅಮ್ಮ! ಇವರು ಉತ್ತರಪ್ರದೇಶಕ್ಕೆ ಪ್ರವಾಸಕ್ಕೆ ಬಂದಾಗ ಜೌನ್‍ಪುರದ ತ್ರಿಲೋಚನ್ ಮಹಾದೇವ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ.
ಈ ರೀತಿ ಮದುವೆಯಾದವರು ಕಿಯಾಮಾ ದಿನ್ ಖಲೀಫಾ ಹಾಗೂ ಕೇಶಾ ಕಲೀಫಾ. ಅವರು ಭಾರತ ಪ್ರವಾಸದಲ್ಲಿದ್ದಾರೆ, ಇಲ್ಲಿ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಮಾರುಹೋಗಿ ಹಿಂದೂ ಸಂಪ್ರದಾಯದ ಪ್ರಕಾರ ಮರು ಮದುವೆಯಾಗಲು ನಿರ್ಧರಿಸಿ, ಮದುವೆಯಾಗಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಮ್ಮ ಮದುವೆಯಾಗಿ 18 ವರ್ಷಗಳಾಗಿವೆ. 9 ಮಕ್ಕಳು ಇದ್ದಾರೆ. ವಾರಣಾಸಿಯ ದೇವಾಲಯಗಳು ಹಾಗೂ ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಇಲ್ಲಿಯ ಸಂಸ್ಕೃತಿಗೆ ಆಕರ್ಷಿತರಾದೆವು. ಆದ್ದರಿಂದ ಇಲ್ಲಿಯ ಸಂಪ್ರದಾಯದಂತೆ ಮದುವೆಯಾಗಲು ನಿಶ್ಚಯಿಸಿದೆವು' ಎಂದಿದ್ದಾರೆ. ಕಿಯಾಮಾ ದಿನ್ ಖಲೀಫಾ ಅವರ ಅಜ್ಜ ಭಾರತೀಯ ಮೂಲದ ಹಿಂದೂ ಆಗಿದ್ದರು. ನಂತರ ಇಸ್ಲಾಂ ಧರ್ಮಕ್ಕೆ ಕುಟುಂಬ ಮತಾಂತರಗೊಂಡಿದೆ. (ಏಜೆನ್ಸೀಸ್)