ತಿರುವನಂತಪುರ: ಆರು ವರ್ಷಗಳಲ್ಲಿ (2014 ರಿಂದ 2019ರವರೆಗೆ) ಐದು ಕೊಲೆ ಮಾಡಿರುವ ಎಂಎ. ಎಂಬಿಎ ಪದವೀಧರನೋರ್ವ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕನ್ಯಾಕುಮಾರಿಯ ತೋವಾಲದ ನಿವಾಸಿ ರಾಜೇಂದ್ರನ್ ಅಲಿಯಾಸ್ ರಾಜೇಶ್ (39) ಎಂಬಾತನೇ ಈ ಸೀರಿಯಲ್ ಕಿಲ್ಲರ್. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಎಂಬಿಎ ಪದವಿಯನ್ನೂ ಮುಗಿಸಿರುವ ರಾಜೇಂದ್ರನ್ ಇದಾಗಲೇ ಐದು ಕೊಲೆ ಮಾಡಿದ್ದು, ಪೊಲೀಸರ ಕಣ್ಣಿಗೆ ಬೀಳದೇ ಹಾಯಾಗಿದ್ದ. ಅಷ್ಟಕ್ಕೂ ಈತ ಕೊಲೆ ಮಾಡುತ್ತಿದ್ದ ಉದ್ದೇಶ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುವ ಚಟಕ್ಕೆ.
ತಮಿಳುನಾಡಿನ ನಾಗರ್ಕೋಯಿಲ್ ಜಿಲ್ಲೆಯ 37 ವರ್ಷದ ಮಹಿಳೆ ಸೇರಿದಂತೆ ಐದು ಕೊಲೆ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ. 2014ರಲ್ಲಿ ತಮಿಳುನಾಡಿನಲ್ಲಿ ಕಸ್ಟಮ್ಸ್ ಅಧಿಕಾರಿ ಹಾಗೂ ಆತನ ಕುಟುಂಬದ ಮೂವರು ಸದಸ್ಯರ ಕೊಲೆ ಮಾಡಿದ್ದನು. ಆಗ ಈತನನ್ನು ಪೊಲೀಸರು ಬಂಧಿಸಿದ್ದರು. ಆದರೆ ಕೋರ್ಟ್‌ನಲ್ಲಿ ಕೊಲೆ ಪ್ರಕರಣದ ವಿಚಾರಣೆ ಆರಂಭವಾಗುವುದಕ್ಕೂ ಮುನ್ನವೇ ಕೇರಳಕ್ಕೆ ಹೋಗಿ ತಪ್ಪಿಸಿಕೊಂಡಿದ್ದ. ಆದ್ದರಿಂದ ಆತನನ್ನು ಹುಡುಕುವಲ್ಲಿ ಪೊಲೀಸರು ವಿಫಲರಾಗಿದ್ದರು.
ನಂತರ ಇಲ್ಲಿ ಕದ್ದು ಆನ್‌ಲೈನ್‌ನಲ್ಲಿ ಹಾಕಿದ ಹಣವೆಲ್ಲಾ ಖಾಲಿಯಾದ ಮೇಲೆ ಮತ್ತೆ ಕೊಲೆ ಮಾಡುವ ಸಂಚು ರೂಪಿಸಿದ್ದ ರಾಜೇಶ್. ಅದಕ್ಕಾಗಿ ತಮಿಳುನಾಡಿಗೆ ಬಂದು ಚಹಾ ಅಂಗಡಿವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಆಗ ಆತನ ಕಣ್ಣು ವಿನೀತಾ ಎನ್ನುವ ಮಹಿಳೆ ಧರಿಸಿದ್ದ ಚಿನ್ನದ ಸರದ ಮೇಲೆ ಬಿತ್ತು. ಅವರನ್ನು ಕೊಲೆ ಮಾಡಿದ್ದ ಈತ ಸರ ಅಡವಿಟ್ಟು ಅದರಿಂದ 95 ಸಾವಿರ ರೂ. ನಗದು ಪಡೆದುಕೊಂಡು ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹಾಕಿದ್ದ.
ಇತ್ತ ವಿನೀತಾ ಅವರು ಕೊಲೆಯ ಬೆನ್ನತ್ತಿ ಹೋದ ಪೊಲೀಸರು ಸ್ಥಳದ ಸಿಸಿಟಿವಿ ಫುಟೇಜ್ ನೋಡಿದರು. ಅಲ್ಲಿ ರಾಜೇಶ್‌ನ ಚಹರೆ ಪತ್ತೆಯಾಗಿತ್ತು. ಆದರೆ ಅಲ್ಲಿಂದ ಆತ ಎಲ್ಲಿಗೆ ಹೋದ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಸಿಸಿಟಿವಿಯಲ್ಲಿ ರಾಜೇಶ್ ಆಟೋ ಚಾಲಕನ ಜತೆ ಮಾತನಾಡುತ್ತಿದ್ದುದು ಕಂಡುಬಂದಿತ್ತು. ಆ ಆಟೋ ಚಾಲಕನ ಪತ್ತೆ ಮಾಡಿದ ಪೊಲೀಸರು ಚಾಲಕನನ್ನು ವಿಚಾರಿಸಿದರು.
ಫೋಟೋ ನೋಡಿದ ಆಟೋ ಚಾಲಕ, ಆ ದಿನ ಈತ ತನ್ನ ಬಳಿ ಕುಡಿಯಲು ನೀರು ಕೇಳಿದ್ದಾಗಿ ಹೇಳಿದ. ಹೀಗೇ ಮಾತುಕತೆ ನಡೆಸಿದ್ದಾಗ ತಾನೊಂದು ಚಹದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಎಂದು ಚಾಲಕ ಹೇಳಿದ. ಇದೇ ಮಾತನ್ನು ಆಧಾರವಾಗಿಟ್ಟುಕೊಂಡು ಚಹದ ಅಂಗಡಿಗಳನ್ನು ಪೊಲೀಸರು ತಡಕಾಡಿದಾಗ, ಒಂದು ಅಂಗಡಿಯಲ್ಲಿ ಈತ ಕೆಲಸಕ್ಕೆ ಇದ್ದುದು ತಿಳಿದುಬಂತು.
ಅಲ್ಲಿಗೆ ಹೋಗಿ ಹೊಂಚು ಹಾಕಿದ ಪೊಲೀಸರು ಕೊನೆಗೂ ರಾಜೇಶ್‌ನನ್ನು ಹಿಡಿದಿದ್ದಾರೆ. ಈತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.