ನ್ಯೂಸ್

VIDEO: ಕೃಷಿ ಕಾಯ್ದೆ ವಿರೋಧಿ ಜಾಗವೇ ಕಲ್ಯಾಣ ಮಂಟಪ- ಪ್ರತಿಭಟನಾಕಾರರೇ ಅತಿಥಿಗಳು: ಹೀಗೊಂದು ಮದುವೆ...

ಭೋಪಾಲ್: ಕೃಷಿ ಕಾಯ್ದೆ ವಿರೋಧಿಸಿ ಹಲವು ಕಡೆಗಳಲ್ಲಿ ಇನ್ನೂ ಹಲವೆಡೆ ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಅದೇ ರೀತಿ ಮಧ್ಯಪ್ರದೇಶದ ಭೋಪಾಲ್​ನ ರೇವಾ ಎಂಬ ಪಟ್ಟಣದಲ್ಲಿಯೂ ಕಳೆದ ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ.

ಈ ಪ್ರತಿಭಟನೆಯ ನಡುವೆಯೇ ರೈತ ಸಂಘದ ನಾಯಕರೊಬ್ಬರು ತಮ್ಮ ಮಗಳ ಮದುವೆಯನ್ನು ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಡಾ.ಬಿ.ಆರ್​. ಅಂಬೇಡರ್ಕರ್​ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರದ ಸುತ್ತಲೂ ಈ ದಂಪತಿ ಪ್ರತಿಭಟನಾ ಸ್ಥಳದಲ್ಲಿಯೇ ಸಪ್ತಪದಿ ತುಳಿದಿದ್ದಾರೆ.

ಹೀಗೆ ಮದುವೆಯಾದ ದಂಪತಿ ಹೆಸರು ಸಚಿನ್​ ಮತ್ತು ಆಸ್ಮಾ. ಎಂತಹ ಸಂದರ್ಭ ಬಂದರೂ ಈ ಜಾಗವನ್ನು ಬಿಟ್ಟು ತೆರಳದೆ ತಮ್ಮ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡುವ ಮೂಲಕ ಕಳೆದ ತಿಂಗಳಿನಿಂದಲೂ ಇಲ್ಲಿ ಪ್ರತಿಭಟನೆ ನಡೆಯುತ್ತಲೇ ಇದ್ದು, ಮದುವೆಯಿಂದಾಗಿ ಮತ್ತೆ ಈ ಭಾಗದಲ್ಲಿನ ಪ್ರತಿಭಟನೆ ಮುನ್ನೆಲೆಗೆ ಬಂದಿದೆ. ಮಧ್ಯಪ್ರದೇಶದ ಕಿಸಾನ್ ಯೂನಿಯನ್‍ನ ಜಿಲ್ಲಾ ನಾಯಕ ರಾಮ್‍ಜಿತ್ ಸಿಂಗ್ ಅವರ ಪುತ್ರಿಯ ವಿವಾಹ ಇದಾಗಿದೆ.

ನಾವು ಕೇಂದ್ರ ಸರ್ಕಾರಕ್ಕೆ ಬಲವಾದ ಸಂದೇಶ ನೀಡುತ್ತಿದ್ದು, ಯಾವುದೇ ಸಂದರ್ಭದಲ್ಲೂ ಈ ಜಾಗವನ್ನು ಬಿಟ್ಟು ಕದಲುವುದಿಲ್ಲ. ಇಲ್ಲೇ ಮದುವೆಯನ್ನು ನೆರವೇರಿಸಿದ್ದೇವೆ. ಈ ಮದುವೆಯಲ್ಲಿ ಯಾವುದೇ ವರದಕ್ಷಿಣೆ ಪಡೆಯದೆ ಮಾಡಿದ್ದೇವೆ ಈ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದೇವೆ ಎಂದು ವಧುವಿನ ಅಪ್ಪ ರಾಮ್​ಜಿತ್​ ಹೇಳಿದ್ದಾರೆ.

ಸಂವಿಧಾನವನ್ನು ರಕ್ಷಿಸುವ ಪ್ರಮಾಣ ಮಾಡಿ, ಬಾಬಾ ಸಾಹೇಬ್ ಮತ್ತು ಸಾವಿತ್ರಿಬಾಯ್ ಪುಲೆ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುವ ಮೂಲಕ ಸಪ್ತಪದಿ ತುಳಿದಿರುವುದಾಗಿ ನವದಂಪತಿ ಹೇಳಿದರು. ನಂತರ ಮದುವೆಯಲ್ಲಿ ತಮಗೆ ಸಿಕ್ಕ ಉಡುಗೊರೆಗಳನ್ನು ಪ್ರತಿಭಟನೆ ನಿರತ ರೈತರಿಗೆ ನೀಡಿ ನಮ್ಮ ಬೇಡಿಕೆ ಈಡೇರುವವರೆಗೆ ಇಲ್ಲಿಂದ ತೆರಳುವುದಿಲ್ಲ ಎಂದು ಹೇಳಿದರು.