ನ್ಯೂಸ್

ಮದುವೆಯಾಗೋ ಪ್ಲ್ಯಾನ್​ ಇದ್ರೆ ಇಲ್ಲಿ ಆಗ್ಬೋದು- ಏಕೆಂದ್ರೆ ನವಜೋಡಿಗೆ ಸಿಗುತ್ತೆ 1.67 ಲಕ್ಷ ರೂಪಾಯಿ!

ರೋಮ್​: ಈಗ ಮದುವೆ ಮಾಡಿಸುವುದು ಎಂದರೆ ಅಷ್ಟು ಸುಲಭವಲ್ಲ. ಅತ್ಯಂತ ಕಡಿಮೆ ಖರ್ಚಿನಲ್ಲಿ ಮದುವೆ ಮಾಡಿಸುವುದಿದ್ದರೂ ಲಕ್ಷಾಂತರ ರೂಪಾಯಿ ಬೇಕೇ ಬೇಕು. ಇನ್ನು ನಗರ ಪ್ರದೇಶಗಳ ಮಾತಂತೂ ಕೇಳಲೇಬೇಡಿ. ಪರಿಸ್ಥಿತಿ ಹೀಗಿರುವಾಗ ನೀವು ಮದುವೆಯಾಗಲು ಗೊತ್ತು ಮಾಡಿದ ಜಾಗದವರೇ ಹಣವನ್ನು ನಿಮಗೇ ಕೊಡುವುದಿದ್ದರೆ?

ಹೀಗೂ ಇರುತ್ತಾ ಎಂದು ಅಚ್ಚರಿ ಪಡಬೇಡಿ. ಅಂಥದ್ದೊಂದು ಜಾಲ ಇದೆ. ಇಲ್ಲಿ ಮದುವೆಗೆ ಜಾಗ ನೀಡುವುದೂ ಅಲ್ಲದೇ, ಇಲ್ಲಿ ಮದುವೆಯಾದರೆ 1.67 ಲಕ್ಷ ರೂಪಾಯಿ ನಿಮಗೇ ಸಿಗುತ್ತೆ ಎಂದರೆ ನಂಬುವುದು ಕಷ್ಟವೇ ಅಲ್ಲವೆ?

ಅಂಥದ್ದೊಂದು ಜಾಗ ಇರುವುದು ಮಧ್ಯ ಇಟಲಿಯ ಲಾಜಿಯೊದಲ್ಲಿ. ಜಗತ್ತಿನ ಅತ್ಯಂತ ಸುಂದರ ತಾಣಗಳಲ್ಲಿ ಒಂದು ಎನಿಸಿರುವ ರೋಮ್​ನ ಬಳಿ ಈ ಲಾಜಿಯೊ ಇದೆ. 2017ರ ಡಿಸೆಂಬರ್​ 11ರಂದು ಕ್ರಿಕೆಟ್​ ತಾರೆ ವಿರಾಟ್​ ಕೊಹ್ಲಿ ಅವರು ನಟಿ ಅನುಷ್ಕಾ ಶರ್ಮಾರನ್ನು ಮದುವೆಯಾಗಿದ್ದು ಇದೇ ಜಾಗದಲ್ಲಿ.

ಈ ಪ್ರದೇಶವನ್ನು ಇನ್ನಷ್ಟು ಪ್ರಸಿದ್ಧಗೊಳಿಸುವ ಸಲುವಾಗಿ ಸರ್ಕಾರ 83 ಕೋಟಿ ರೂಪಾಯಿಗಳನ್ನು ಮೀಸಲು ಇರಿಸಿದೆ. ಇದೇ ಕಾರಣಕ್ಕೆ ಇಲ್ಲಿ ಮದುವೆಯಾಷ್ಟೇ ಅಲ್ಲದೇ ಯಾವುದೇ ಸಭೆ ಸಮಾರಂಭ ನಡೆಸಿದರೂ ಹಣವನ್ನು ನೀಡಲಾಗುತ್ತದೆ. ಇಲ್ಲಿ ರೋಮ್‌ನ ಸಾಂಪ್ರದಾಯಿಕ ಕೊಲಿಸಿಯಂ ಅವಶೇಷಗಳು ಮತ್ತು ಕ್ಲಾಸಿಕ್ ಪುರಾತನ ರೋಮನ್ ವಾಸ್ತುಶಿಲ್ಪದ ಸ್ಮಾರಕಗಳೂ ಇವೆ.

ಆರ್ಥಿಕ ಬಿಕ್ಕಟ್ಟಿನಿಂದ ಕೆಟ್ಟದಾಗಿ ಬಳಲುತ್ತಿರುವ ವಲಯವನ್ನು ಬೆಂಬಲಿಸಲು ಈ ಯೋಜನೆ ಅಗತ್ಯವಿದೆ ಎಂದು ಲಾಜಿಯೊ ಅಧ್ಯಕ್ಷ ನಿಕೋಲಾ ಜಿಂಗಾರೆಟ್ಟಿ ಹೇಳಿದ್ದಾರೆ.

ಅಂದಹಾಗೆ ಈ ಆಫರ್​ ಕಳೆದ ಜನವರಿಯಿಂದ ಶುರುವಾಗಿದ್ದು ಈ ವರ್ಷದ ಅಂದರೆ 2022ರ ಡಿಸೆಂಬರ್​ವರೆಗೂ ಇದೆ. ಭಾರತದಿಂದ ಇಟಲಿಯವರೆಗಿನ ಪ್ರಯಾಣ ದುಬಾರಿಯಾದರೂ ಹಣವಿದ್ದವರು ಇಲ್ಲಿ ಟ್ರೈ ಮಾಡಬಹುದು.