ನ್ಯೂಸ್

ಕ್ಲಾಸ್​ರೂಂನಲ್ಲಿ ವಿವಾಹ ಪ್ರಕರಣಕ್ಕೆ ಟ್ವಿಸ್ಟ್​- ಮದ್ವೆಯಾಯ್ತು ಅಮಾನ್ಯ: ಮಗಳಿಗೆ ಮನೆಯಲ್ಲಿ ನೋ ಎಂಟ್ರಿ

suchetana

ರಾಜಮಂಡ್ರಿ (ಆಂಧ್ರ ಪ್ರದೇಶ): ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಕ್ಲಾಸ್​ರೂಮಿನಲ್ಲಿಯೇ ಮದುವೆಯಾಗಿರುವ ಸುದ್ದಿ ಇದೀಗ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಂಧ್ರಪ್ರದೇಶದಲ್ಲಿ ಕೆಲವು ಶಾಲೆಗಳು ಆರಂಭವಾದ ದಿನದಂದು ಈ ಘಟನೆ ನಡೆದಿದ್ದು, ಈ ಮದುವೆ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಈ ಸಂಬಂಧ ಇದಾಗಲೇ ಈ ಇಬ್ಬರು ಅಪ್ರಾಪ್ತರನ್ನು ಪ್ರಾಂಶುಪಾಲರು ಟಿ.ಸಿ ಕೊಟ್ಟು ಶಾಲೆಯಿಂದ ಹೊರಕ್ಕೆ ಆಗಿರುವುದೂ ನಡೆದಿದೆ. ಕಳೆದ ತಿಂಗಳು 17 ರಂದು ಈ ವಿವಾಹ ನಡೆದಿದ್ದು, ಅದರ ಫೋಟೋ ಇದೀಗ ವೈರಲ್​ ಆಗಿದೆ.

ಈ ಇಬ್ಬರು ಸಹಪಾಠಿಗಳು 17 ವರ್ಷದವರು ಎಂದು ತಿಳಿದುಬಂದಿದೆ. ಕ್ಲಾಸ್​ರೂಂ ಒಳಗೆ ಬಾಲಕ ಬಾಲಕಿಗೆ ಮಂಗಳಸೂತ್ರ ಕಟ್ಟಿ, ಹಣೆಗೆ ಸಿಂಧೂರ ಹಚ್ಚಿದ್ದ. ಮದುವೆಯ ನಂತರ ಇವರು ಫೋಟೋ ಕ್ಲಿಕ್ಕಿಸಿಕೊಂಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಮಾತ್ರವಲ್ಲದೇ ಬಾಲಕಿಯ ಸ್ನೇಹಿತೆ ವಿಡಿಯೊ ಮಾಡಿ, ತನ್ನ ಇತರ ಸ್ನೇಹಿತರೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾಳೆ.

ಆದರೆ ಇದೀಗ ಈ ಪ್ರಕರಣಕ್ಕೆ ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದ್ದು, ಅಪ್ರಾಪ್ತರ ಮದುವೆಯಾಗಿರುವ ಕಾರಣ, ಈ ಮದುವೆಯನ್ನು ಅನೂರ್ಜಿತ ಮಾಡಲಾಗಿದೆ. ಹಿಂದೂ ವೈವಾಹಿಕ ಕಾಯ್ದೆಯ ಅಡಿ ಅಪ್ರಾಪ್ತರ ವಿವಾಹವು ವಿವಾಹವಲ್ಲ, ಅದಕ್ಕೆ ಕಾನೂನಿನಡಿ ಯಾವುದೇ ಮಾನ್ಯತೆ ಇಲ್ಲ. ಆದ್ದರಿಂದ ಈ ಮದುವೆಯನ್ನೂ ಅಧಿಕಾರಿಗಳು ಅಮಾನ್ಯ ಮಾಡಿದ್ದಾರೆ.

ಸದ್ಯ ಇವರಿಬ್ಬರ ವಿರುದ್ಧ ಕೇಸ್​ ದಾಖಲಾಗಿದೆ. ಈ ವಿಷಯ ಸುದ್ದಿಯಾಗುತ್ತಿದ್ದಂತೆಯೇ ತಮ್ಮ ಮಗಳನ್ನು ಮನೆಯೊಳಕ್ಕೆ ಕರೆದುಕೊಳ್ಳಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಮನೆಯಲ್ಲಿ ಆಕೆಗೆ ಪ್ರವೇಶ ನೀಡಲಿಲ್ಲ. ಆದ್ದರಿಂದ ಮಕ್ಕಳ ಆಯೋಗದಲ್ಲಿ ಬಾಲಕಿಗೆ ಆಶ್ರಯ ನೀಡಲಾಗಿದೆ. ಅವಳನ್ನು ಕೌನ್ಸೆಲಿಂಗ್​ಗೆ ಕಳುಹಿಸಲಾಗಿದೆ ಎಂದು ಆಂದ್ರಪ್ರದೇಶದ ಮಹಿಳಾ ಆಯೋಗದ ಅಧ್ಯಕ್ಷ ವಾಸಿರೆಡ್ಡಿ ಪದ್ಮಾ ಹೇಳಿದ್ದಾರೆ.

ಈಗ ಅತ್ತ ಶಾಲೆಯಲ್ಲೂ ದಾಖಲು ಮಾಡಿಕೊಳ್ಳುತ್ತಿಲ್ಲ, ಇತ್ತ ಬಾಲಕಿಗೆ ಮನೆಯಲ್ಲಿಯೂ ಪ್ರವೇಶವಿಲ್ಲ. ಆಗಿರುವ ಮದುವೆಯೂ ಅನೂರ್ಜಿತವಾಗಿದೆ, ಸಾಲದು ಎಂಬುದಕ್ಕೆ ಮಾಡಿರುವ ತಪ್ಪಿಗಾಗಿ ಕೋರ್ಟ್​ ಅಲೆದಾಡಬೇಕಾಗಿದೆ. ಸದ್ಯ ಬಾಲಕನ ಬಗ್ಗೆ ಇದುವರೆಗೆ ತಿಳಿದುಬಂದಿಲ್ಲ.