ನ್ಯೂಸ್

ಮನೆಯಲ್ಲಿಯೇ ತಯಾರಿಸಿ ವೈವಿಧ್ಯಮಯ ಆರೋಗ್ಯವರ್ಧಕ ಕಷಾಯಪುಡಿ

ಅತ್ಯಂತ ಪುರಾತನವಾದ ಔಷಧ ಎಂದರೆ ಅದು ಆಯುರ್ವೇದ. ಕರೊನಾದ ಈ ದಿನಗಳಲ್ಲಿ ಬಗೆಬಗೆ ಕಷಾಯಕ್ಕೆ ಭಾರಿ ಬೇಡಿಕೆ ಬಂದಿದೆ. ಅಂಗಡಿಗಳಲ್ಲಿ ಸಿಗುವ ಕಷಾಯಪುಡಿಗಳಲ್ಲಿ ಏನೇನೋ ಮಿಕ್ಸ್​ ಆಗಿರಬಹುದು ಎಂಬ ಸಂದೇಹ ಬರುವುದು ಸಹಜ. ಆದ್ದರಿಂದ ಅಷ್ಟೆಲ್ಲಾ ಸಂದೇಹ ಪಡುವ ಬದಲು ಮನೆಯಲ್ಲಿಯೇ ತಯಾರಿಸಬಹುದು ವಿವಿಧ ಕಷಾಯಪುಡಿಗಳು. ಇದರ ಕುರಿತು ಇಲ್ಲಿ ವಿವರಿಸಿದ್ದಾರೆ

| ಸುಧಾ ಎಚ್‌.ಎಸ್‌.

ಲಿಂಬು ಕಷಾಯ

ಅಗತ್ಯ ಪದಾರ್ಥಗಳು

2 ಲಿಂಬೇ ಹಣ್ಣು

3 ಚಮಚ ಜೀರಿಗೆ

ಒಂದೆರಡು ಮೆಣಸಿನಕಾಳು

3 ಎಲೆ ತುಳಸಿ

ಚಿಟಿಕೆ ಉಪ್ಪು

ಸ್ವಲ್ಪ ಕಲ್ಲುಸಕ್ಕರೆ

3 ಲೋಟ ನೀರು

ಮಾಡುವುದು ಹೀಗೆ: ಒಂದು ಪಾತ್ರೆಯಲ್ಲಿ ನೀರು ಹಾಕಿ. ಅದಕ್ಕೆ ಲಿಂಬೆಹಣ್ಣು ಸೇರಿದಂತೆ ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನೂ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಪಾತ್ರೆಯಲ್ಲಿರುವ ನೀರು ಕಾದು ಕಾದು ಅರ್ಧಭಾಗಕ್ಕೆ ಬರುವವರೆಗೂ ಕುದಿಸಿದರೆ ಕಷಾಯ ಸಿದ್ಧ.

ಪ್ರಯೋಜನ: ಜ್ವರ, ನೆಗಡಿ ಇದ್ದರೆ ದಿನಕ್ಕೆ ಮೂರು ಬಾರಿ ಸೇವಿಸಿದರೆ ಅದು ಶೀಘ್ರ ವಾಸಿಯಾಗುವುದು. ಇದನ್ನು ಆರೋಗ್ಯವಂತರೂ ದಿನಕ್ಕೊಂದು ಬಾರಿ ಕುಡಿಯಬಹುದು.

ಹಿಪ್ಪಲಿ ಕಷಾಯ

ಅಗತ್ಯ ಪದಾರ್ಥಗಳು

ಒಂದು ಹಿಪ್ಪಲಿ

ಅರ್ಧ ಇಂಚು ಒಣಶುಂಠಿ

8- 10 ಕಾಳುಮೆಣಸು

ನಾಲ್ಕೈದು ಎಲೆ ತುಳಸಿ

ನಾಲ್ಕು ಚಮಚ ಬೆಲ್ಲದ ಪುಡಿ

2 ಲೋಟ ನೀರು

ಮಾಡುವುದು ಹೀಗೆ: ಮೇಲಿನ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಜಜ್ಜಿಕೊಳ್ಳಿ. ಎರಡು ಲೋಟ ನೀರಿಗೆ ಎಲ್ಲವನ್ನೂ ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ.

ನೀರು ಅರ್ಧ ಭಾಗಕ್ಕೆ ಬರುವವರೆಗೂ ಕಾಯಿಸಿ. ಸ್ವಲ್ಪ ಬಿಸಿಯಾಗಿದ್ದಲೇ ಕುಡಿಯಿರಿ.

ಪ್ರಯೋಜನ: ಕೆಮ್ಮು ಮತ್ತು ಗಂಟಲು ನೋವಿಗೆ ಇದು ಉತ್ತಮ ಔಷಧ. ಆಹಾರದ ಮೊದಲು ದಿನಕ್ಕೆ ಮೂರು ಸಲದಂತೆ ಸೇವಿಸಿ. ಶೀತವಾಗಿದ್ದರೆ ಇದಕ್ಕೆ ಸ್ವಲ್ಪ ಹಾಲು ಸೇರಿಸಿಕೊಳ್ಳಿ. ಅದಕ್ಕೆ ಚಿಟಿಕೆಯಷ್ಟು ಅರಿಶಿಣ ಹಾಕಿ ಚೆನ್ನಾಗಿ ಕುದಿಸಿ. ಕುಡಿಯುವ ಸಂದರ್ಭದಲ್ಲಿ ಸ್ವಲ್ಪ ಜೇನುತುಪ್ಪ ಸೇರಿಸಿ.

ದೊಡ್ಡಪತ್ರೆಯ (ಸಾಸಂಬರ್‌) ಕಷಾಯ

ಅಗತ್ಯ ಪದಾರ್ಥಗಳು

10- 12 ದೊಡ್ಡಪತ್ರೆ ಎಲೆ

2 ಚಮಚ ಕಾಳುಮೆಣಸು

2 ಚಮಚ ಜೀರಿಗೆ

3 ಚಮಚ ಬೆಲ್ಲದ ಪುಡಿ

4 ಕಪ್‌ ನೀರು

ಮಾಡುವುದು ಹೀಗೆ: ದೊಡ್ಡಪತ್ರೆ ಎಲೆಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಕಾಳುಮೆಣಸು, ಬೆಲ್ಲ, ಜೀರಿಗೆ ಜಜ್ಜಿಕೊಳ್ಳಿ. ಇದನ್ನು ನೀರಿಗೆ ಹಾಕಿ ಕುದಿಸಿ. ಇದು ಕುದಿಯುತ್ತಿರುವಾಗ ದೊಡ್ಡಪತ್ರೆ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ. ಇದನ್ನು ಬಿಸಿಯಾಗಿರುವಾಗಲೇ ಸ್ವಲ್ಪ ಸ್ವಲ್ಪವೇ ಕುಡಿಯಿರಿ. ದೊಡ್ಡಪತ್ರೆಯ ಬದಲು ಲಿಂಬೆಹುಲ್ಲನ್ನು ಹಾಕಿಯೂ ಈ ರೀತಿ ಕಷಾಯ ತಯಾರಿಸಿಕೊಳ್ಳಬಹುದು. ಅದನ್ನು ಜೇನುತುಪ್ಪದ ಜೊತೆ ಕುಡಿದರೆ ಉತ್ತಮ.

ಪ್ರಯೋಜನ: ಗಂಟಲ ಕೆರೆತ, ಕಫ, ಹೊಟ್ಟೆ ಉಬ್ಬರ, ಶೀತದಿಂದ ತಲೆನೋವಿಗೆ ಇದು ಉತ್ತಮ ಔಷಧ.

ಕೊತ್ತಂಬರಿ- ಕಷಾಯ

ಅಗತ್ಯ ಪದಾರ್ಥಗಳು

1 ಚಮಚ ಜೀರಿಗೆ

1 ಚಮಚ ಧನಿಯಾ

1 ಜ್ಯೇಷ್ಠಮಧು

ಕಾಲು ಚಮಚ ಮೆಂತ್ಯ

10 ಕಾಳುಮೆಣಸು

ಕಾಲು ಚಮಚ ಓಮದ ಪುಡಿ

ಒಂದು ಚಮಚ ಅರಿಶಿಣ

4 ಲವಂಗ

1 ಚಮಚ ಶುಂಠಿ ಪುಡಿ

ಕಾಲು ಹಿಪ್ಪಲಿ

ಕಾಲು ಕಪ್‌ ಹಾಲು

1 ಚಮಚ ಬೆಲ್ಲದ ಪುಡಿ

3 ಕಪ್‌ ನೀರು

ಮಾಡುವುದು ಹೀಗೆ: ಬೆಲ್ಲ ಬಿಟ್ಟು ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನೂ ಹುರಿದುಕೊಳ್ಳಿ. ಅದು ಆರಿದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಈ ಪುಡಿಯನ್ನು ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ ಶೋಧಿಸಿ. ಇದಕ್ಕೆ ಹಾಲು ಸೇರಿಸಿ ಕುಡಿಯಿರಿ.

ಪ್ರಯೋಜನ: ದಿನಕ್ಕೆರಡು ಬಾರಿ ಊಟಕ್ಕಿಂತ ಮುಂಚೆ ಸೇವಿಸಿದರೆ ಶೀತದಿಂದ ಕಟ್ಟಿದ ಮೂಗು ತೆರೆದುಕೊಳ್ಳುತ್ತದೆ, ಶೀತ ವಾಸಿಯಾಗುತ್ತದೆ.

ಹಸಿ ಶುಂಠಿ ಕಷಾಯ

ಅಗತ್ಯ ಪದಾರ್ಥಗಳು

ಒಂದು ದೊಡ್ಡ ಶುಂಠಿ

ಒಂದು ಚಮಚ ಬೆಲ್ಲ

ಕಾಲು ಕಪ್‌ ಹಾಕು

ಎರಡು ಕಪ್‌ ನೀರು

ಮಾಡುವುದು ಹೀಗೆ: ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ. ನಂತರ ಇದಕ್ಕೆ ಬೆಲ್ಲ ಹಾಕಿ ಪುನಃ ಕುದಿಸಿ ಗ್ಯಾಸ್‌ ಆರಿಸಿ. ಇದಕ್ಕೆ ಹಾಲು ಸೇರಿಸಿ. ಬಿಸಿ ಇರುವಾಗಲೇ ಸೇವಿಸಿ

ಪ್ರಯೋಜನ: ಗಂಟಲು ಕೆರೆತ, ಶೀತ, ತಲೆಭಾರ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ದಿನಕ್ಕೆ 2 3 ಬಾರಿ ಸೇವಿಸಿ. ಇದಕ್ಕೆ ಒಂದು ಚಿಕ್ಕ ಜೇಷ್ಠಮಧುವನ್ನು ಸೇರಿಸಿ ಕುದಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

ಕರಿಮೆಣಸಿನ ಕಷಾಯ

‌ಅಗತ್ಯ ಪದಾರ್ಥಗಳು

2 ಚಮಚ ಕರಿಮೆಣಸು

ಅರ್ಧ ಚಮಚ ಜೀರಿಗೆ

ಅರ್ಧ ಇಂಚು ಒಣಶುಂಠಿ

ಕಾಲು ಚಮಚ ಕೊತ್ತಂಬರಿ

ಕಾಲು ಚಮಚ ಉದ್ದಿನ ಬೇಳೆ

ಒಂದು ಏಲಕ್ಕಿ

2 ಲವಂಗ

ಕಾಲು ಚಮಚ ಅರಿಶಿಣ

ಮಾಡುವುದು ಹೀಗೆ: ಈ ಮೇಲಿನ ಎಲ್ಲ ಪದಾರ್ಥಗಳನ್ನು ಹುರಿದು ಪುಡಿ ಮಾಡಿಕೊಳ್ಳಿ. ಇದನ್ನು ಬಾಟಲಿಯಲ್ಲಿ ಹಾಕಿಟ್ಟುಕೊಂಡು ಬೇಕಾದಾಗ ಬಳಸಿಕೊಳ್ಳಬಹುದು.

ಕಷಾಯ ಮಾಡುವ ವಿಧಾನ: ಎರಡು ಲೋಟ ನೀರಿಗೆ ಈ ಪುಡಿಯನ್ನು ಸೇರಿಸಿ ಕುದಿಸಿ. ಕುದಿಯುವ ನೀರಿಗೆ ಸ್ವಲ್ಪ ಬೆಲ್ಲದ ಚೂರು, ಸ್ವಲ್ಪ ಉಪ್ಪು, ತುಳಸಿ ಎಲೆ ಹಾಕಿ.

ಪ್ರಯೋಜನ: ಇದು ಜ್ವರ, ಶೀತ, ನೆಗಡಿ ಕಡಿಮೆ ಮಾಡುತ್ತದೆ. ಶೀತದಿಂದ ಬಾಯಿ ರುಚಿಸದಿದ್ದರೆ ಈ ಕಷಾಯ ಕುಡಿದು ನೋಡಿ.

ಒಣಶುಂಠಿ ಕಷಾಯ

ಅಗತ್ಯ ಪದಾರ್ಥಗಳು

ಚಿಕ್ಕ ಒಣ ಶುಂಠಿ

1 ಚಮಚ ಕರಿ ಮೆಣಸು,

1 ಚಮಚ ಜೀರಿಗೆ,

1 ಚಮಚ ಕೊತ್ತಂಬರಿ ಬೀಜ

1 ನಿಂಬೆ ಹಣ್ಣು

ಚಿಟಿಕೆ ಉಪ್ಪು

1 ಚಮಚ ಬೆಲ್ಲದ ಪುಡಿ

ಒಂದು ಚಮಚ ಕೆಂಪು ಕಲ್ಲುಸಕ್ಕರೆ.

ಮಾಡುವುದು ಹೀಗೆ: ಒಣ ಶುಂಠಿಯನ್ನು ತುಂಡು ಮಾಡಿ ಅಥವಾ ಜಜ್ಜಿಕೊಳ್ಳಿ. ಕರಿಮೆಣಸು, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಪ್ರತ್ಯೇಕವಾಗಿ ಹುರಿಯಿರಿ. ಇದಕ್ಕೆ ಒಣ ಶುಂಠಿ ಹಾಕಿ ಪುಡಿಮಾಡಿ. ಈ ಪುಡಿಯನ್ನು ಬಾಟಲಿಯಲ್ಲಿ ತುಂಬಿಸಿಕೊಂಡು ಆಗತ್ಯವಿರುವಾಗ ಕಷಾಯ ತಯಾರಿಸಲು ಉಪಯೋಗಿಸಬಹುದು.

ಕಷಾಯ ತಯಾರಿಸುವುದು ಹೀಗೆ: ನಾಲ್ಕು ಕಪ್‌ ನೀರಿಟ್ಟು ಕುದಿಸಿ. ಕುದಿಯುತ್ತಿರುವ ನೀರಿಗೆ ನಿಂಬೆ ಹಣ್ಣಿನ ರಸ, ಉಪ್ಪು, ಪುಡಿ ಮಾಡಿದ ಬೆಲ್ಲ ಮತ್ತು ಮೇಲೆ ತಯಾರಿಸಿಕೊಂಡ ಪುಡಿಯನ್ನು ಹಾಕಿ. 8 -10 ನಿಮಿಷ ಕುದಿಸಿ. ಬೇಕೆಂದರೆ ಕುದಿಸುವಾಗ ಕೆಂಪು ಕಲ್ಲುಸಕ್ಕರೆ ಸೇರಿಸಬಹುದು. ಬಿಸಿಯಿರುವಾಗಲೇ ಹಾಲು ಸೇರಿಸಿ ಅಥವಾ ಹಾಲು ಸೇರಿಸದೆಯೇ ಕುಡಿಯಿರಿ.

ಪ್ರಯೋಜನ: ನೆಗಡಿ, ಶೀತ, ಮೂಗು ಕಟ್ಟುವಿಕೆಗೆ ಇದು ರಾಮಬಾಣ.

ನೀವೂ ಬರೆಯಬಹುದು: 

ಅಡುಗೆಯಲ್ಲಿ ನಿಮಗೆ ಆಸಕ್ತಿ ಇದೆಯೆ? ಹೊಸ ಹೊಸ ಅಡುಗೆಗಳನ್ನು ಮಾಡಿರುವಿರಾ? ಹಾಗಿದ್ದರೆ ಸೂಕ್ತ ಫೋಟೋ ಜತೆ (ಫೋಟೋ ಜತೆ ಅಡುಗೆಯ ಹೆಸರು ಇರಬೇಕು) ನಿಮ್ಮದೊಂದು ಫೋಟೋ ಇಟ್ಟು ನಮಗೆ ಕಳುಹಿಸಿ. ಮೂರಕ್ಕಿಂತ ಹೆಚ್ಚು ಅಡುಗೆ ಇದ್ದರೆ ಚೆನ್ನ. ನಿಮ್ಮ ರೆಸಿಪಿಯನ್ನು lalithavijayavani@gmail.com ಗೆ ಕಳುಹಿಸಿ. ಸಾಧ್ಯವಾದರೆ 2-3 ನಿಮಿಷಗಳ ವಿಡಿಯೋ ಮಾಡಿ ಕಳುಹಿಸಿ.

ಕ್ಷಣ ಕ್ಷಣದ ಸುದ್ದಿಗಾಗಿ https://www.vijayavani.net/ ಕ್ಲಿಕ್ಕಿಸಿ. vijayavani ಫೇಸ್​ಬುಕ್​ ಪುಟವನ್ನು ಫಾಲೋ​ ಮಾಡಿ ಸುದ್ದಿ ಪಡೆಯಿರಿ.