ನ್ಯೂಸ್

ಮದುವೆ ಮನೆಯಲ್ಲಿ ಡಾನ್ಸ್‌ ಮಾಡುತ್ತ ಕುಸಿದು ಬಿದ್ದ ವರನ ಸಂಬಂಧಿ- ತಮಾಷೆ ಎಂದುಕೊಂಡು ಸಮೀಪ ಹೋದರೆ ಉಸಿರೇ ನಿಂತಿತ್ತು!

suchetana

ಬೇತುಲ್‌ (ಮಧ್ಯಪ್ರದೇಶ): ಸಾವು ಹೇಗೆ ಯಾವಾಗ ಬರುತ್ತದೆ ಎಂದು ಹೇಳುವುದೇ ಕಷ್ಟ. ಆರಾಮಾಗಿದ್ದ ವ್ಯಕ್ತಿ ದಿಢೀರನೆ ಮೃತಪಡುವ ಘಟನೆಗಳು ಸಾಕಷ್ಟು ನಡೆಯುತ್ತಲೇ ಇವೆ. ಅಂಥದ್ದೇ ಒಂದು ಘಟನೆ ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯ ಡೋರಿ ಗ್ರಾಮದಲ್ಲಿ ಸಂಭವಿಸಿದೆ.

ವಿವಾಹ ನಡೆಯುತ್ತಿದ್ದ ವೇಳೆ ಡಾನ್ಸ್‌ ಮಾಡುತ್ತಿದ್ದ ವರನ ಸಂಬಂಧಿಯೊಬ್ಬರು ಇದ್ದಕ್ಕಿದ್ದಂತೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಹಾಡಿಗೆ ತಕ್ಕಂತೆ ಖುಷಿಯಿಂದ ನರ್ತಿಸುತ್ತಿದ್ದ ವ್ಯಕ್ತಿ ದಿಢೀರ್‌ ಮೃತಪಟ್ಟಿದ್ದು, ಮದುವೆ ಮನೆಯಲ್ಲ ಸೂತಕದ ಛಾಯೆ ಮೂಡಿಸಿದ್ದು ಎಲ್ಲರಲ್ಲಿ ಆತಂಕ ಸೃಷ್ಟಿಸಿದೆ. ಅದರ ವಿಡಿಯೋ ವೈರಲ್‌ ಆಗಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆಯೇ ಅವರು ಕುಸಿದುಬಿದ್ದಿದ್ದಾರೆ. ಆಗ ಕೆಲವರು ಅದನ್ನು ತಮಾಷೆ ಎಂದುಕೊಂಡಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಮೇಲೆ ಏಳದಿದ್ದಾಗ ಹತ್ತಿರ ಬಂದು ನೋಡಿದಾಗ ಉಸಿರು ನಿಂತಿರುವುದು ಕಂಡಿದೆ.

ತಕ್ಷಣ ಆತನನ್ನು ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ವೈದ್ಯರ ಪ್ರಕಾರ, ಆ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.