ಹೈದರಾಬಾದ್: ತಾನು ಇಷ್ಟಪಟ್ಟ ಅನ್ಯಧರ್ಮದ ಯುವತಿಯ ಜತೆ ಮದುವೆಯಾಗಿದ್ದಕ್ಕೆ ಯುವಕನೊಬ್ಬ ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಮಾರ್ಪಳ್ಳಿ ಗ್ರಾಮದ ವಿಲ್ಲುಪುರಂ ನಾಗರಾಜ್ ಈ ದುರ್ದೈವಿ. ಪತಿಯನ್ನು ಕಳೆದುಕೊಂಡಿರುವ ಮಾರ್ಪಳ್ಳಿ ಸಮೀಪದ ಘನಾಪುರ ಗ್ರಾಮದ ಸೈಯದ್ ಅಶ್ರೀನ್ ಸುಲ್ತಾನಾ ಕಣ್ಣೀರಿಗೆ ಕೊನೆಯೇ ಇಲ್ಲವಾಗಿದೆ.
ಇವರಿಬ್ಬರೂ ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕುಟುಂಬಸ್ಥರ ವಿರೋಧದ ಮಧ್ಯೆ ಮದುವೆಯಾಗಿದ್ದರು. ಓಡಿಹೋಗಿ ಮದುವೆಯಾದ ಇವರು ಕುಟುಂಬಸ್ಥರ ಕಣ್ಣುತಪ್ಪಿಸಿ ಸಂಸಾರ ನಡೆಸುತ್ತಿದ್ದರು.
ಆದರೆ ಯುವತಿಯ ಕಡೆಯವರಿಗೆ ಇದು ಸಹಿಸಲು ಆಗಲಿಲ್ಲ. ಯುವತಿಯ ಅಣ್ಣ ಮತ್ತು ಆತನ ಸ್ನೇಹಿತ ಮಾರಕಾಯುಧಗಳಿಂದ ನಾಗರಾಜ್ನ ಮೇಲೆ ದಾಳಿ ನಡೆಸಿ ಬರ್ಬರವಾಗಿ ಕೊಂದು ಹಾಕಿದ್ದಾರೆ. ಈ ಹಿಂದೆ ತನ್ನ ತಂಗಿಯಿಂದ ದೂರವಿರುವಂತೆ ಹೇಳಿದ್ದರೂ ಕೇಳದೇ ಮದುವೆಯಾಗಿದ್ದಾನೆ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.
ಹೈದರಾಬಾದ್ನಲ್ಲಿ ನವದಂಪತಿ ವಾಸವಾಗಿದ್ದನ್ನು ಪತ್ತೆ ಮಾಡಿದ ಯುವತಿಯ ಕುಟುಂಬಸ್ಥರು ನಾಗರಾಜನ ಕೊಲೆಗೆ ಪ್ಲ್ಯಾನ್ ಮಾಡಿದ್ದರು. ಕಂಪೆನಿಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿ ಸೇರಿಕೊಂಡಿದ್ದ ನಾಗರಾಜ್ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಅಶ್ರೀನ್ ಸಹೋದರ ಮತ್ತು ಆತನ ಸ್ನೇಹಿತ ಬೈಕ್ನಲ್ಲಿ ಹಿಂಬಾಲಿಸಿ ಬಂದು ಹಲ್ಲೆ ಮಾಡಿದ್ದಾರೆ. ನಾಗರಾಜ್ ಮೇಲೆ ಕಬ್ಬಿಣದ ರಾಡ್ನಿಂದ ಹೊಡೆದಿದ್ದಲ್ಲದೇ, ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ.
ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಯುವತಿಯನ್ನು ಗಂಡಿನ ಮನೆಯವರು ಕರೆದುಕೊಂಡು ಹೋಗಿದ್ದಾರೆ. ಕೊಲೆಯ ಬಗ್ಗೆ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.