ನ್ಯೂಸ್

ನಿಮಗೆ ಉಳಿದಿರುವುದು ಇನ್ನು ನಾಲ್ಕು ದಿನಗಳು ಮಾತ್ರ... ಸಿಎಂ ಯೋಗಿ ಆದಿತ್ಯನಾಥರಿಗೆ ಕೊಲೆ ಬೆದರಿಕೆ...

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆ ಬಂದಿದ್ದು, ಇನ್ನು ಉಳಿದಿರುವುದು ನಾಲ್ಕು ದಿನಗಳು ಮಾತ್ರ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.

ಉತ್ತರ ಪ್ರದೇಶ ಪೊಲೀಸರ ವಾಟ್ಸ್‌ಆ್ಯಪ್‌ ತುರ್ತು ಡಯಲ್ ಸಂಖ್ಯೆ '112'ಕ್ಕೆ ಅಪರಿಚಿತರಿಂದ ಈ ಬೆದರಿಕೆ ಬಂದಿರುವುದಾಗಿ ಮೂಲಗಳು ಹೇಳಿವೆ. ಏಪ್ರಿಲ್ 29ರ ಸಂಜೆ ತುರ್ತು ನಂಬರ್‌ಗೆ ಬೆದರಿಕೆ ಸಂದೇಶ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕೊಲೆ ಬೆದರಿಕೆ ಹಾಕಿದವರು ಯಾರು ಎಂಬ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಕಣ್ಗಾವಲು ತಂಡವನ್ನು ರಚನೆ ಮಾಡಲಾಗಿದೆ.

ಅಷ್ಟಕ್ಕೂ ಯೋಗಿ ಅವರಿಗೆ ಈ ಹಿಂದೆ ಕೂಡ ಸಾಕಷ್ಟು ಬಾರಿ ಕೊಲೆ ಬೆದರಿಕೆ ಬಂದಿವೆ. ಕಳೆದ ಸೆಪ್ಟೆಂಬರ್, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಆದಿತ್ಯನಾಥ್‌ಗೆ ಬೆದರಿಕೆ ಕರೆಗಳು ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಪೈಕಿ ನವೆಂಬರ್‌ನಲ್ಲಿ ಬಂದಿದ್ದ ಕೊಲೆ ಬೆದರಿಕೆಯನ್ನು ಕಳಿಸಿದ್ದವ 15 ವರ್ಷದ ಬಾಲಕನಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದರು. ರಿಮಾಂಡ್‌ ಹೋಂಗೆ ಆತನನ್ನು ಕಳುಹಿಸಲಾಗಿದೆ.

ಯೋಗಿ ಆದಿತ್ಯನಾಥ ಅವರಿಗೆ 2017 ರಲ್ಲಿ ಜೆಡ್‌ಪ್ಲಸ್ ಭದ್ರತೆ, ವಿವಿಪಿ ಸಶಸ್ತ್ರ ಭದ್ರತಾ ಸುರಕ್ಷತೆ ನೀಡಲಾಗಿತ್ತು. ಸದ್ಯ ಇವರಿಗೆ 25-28 ಸಶಸ್ತ್ರ ಕಮಾಂಡೋಗಳ ಭದ್ರತೆ ನೀಡಲಾಗಿದೆ. ಬೆದರಿಕೆ ಕರೆಯಿಂದಾಗಿ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ. ಅವರ ಸಂಚಾರಕ್ಕೆ ಸಿಐಎಸ್ಎಫ್ ಕಮಾಂಡೋಗಳ ತಂಡವು ಭದ್ರತೆ ಒದಗಿಸುತ್ತಿದೆ.