ಲಖನೌ: ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಉತ್ತರ ಪ್ರದೇಶದ ಫರುಖಾಬಾದ್ ಕಾಮುಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಫರುಖಾಬಾದ್ ಕೋರ್ಟ್ ಆದೇಶಿಸಿದೆ.
ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆಯಡಿ ಈತನ ವಿರುದ್ಧ ಕೇಸು ದಾಖಲಾಗಿತ್ತು. ಶಿಕ್ಷೆಯ ಜತೆಗೆ 60 ಸಾವಿರ ರೂ.ಗಳ ದಂಡವನ್ನು ಕೋರ್ಟ್ ವಿಧಿಸಿದೆ.
ರಾಜ್ ಬಹದ್ದೂರ್ ಅಲಿಯಾಸ್ ಭಗತ್ ಎಂಬಾತ ಶಿಕ್ಷೆಗೆ ಒಳಗಾದವ. ಕನ್ನೌಜ್‌ನ ಕನ್ಶಿರಾಮ್ ಕಾಲೋನಿಯ ನಿವಾಸಿಯಾಗಿರುವ ಈತ ಕಳೆದ ಜನವರಿ 22 ರಂದು ರಾಜ್‌ಬಹಾದೂರ್ ಗ್ರಾಮದಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಕೊಲೆ ಮಾಡಿದ್ದ.
ಬಾಲಕಿಗೆ ಚಾಕಲೇಟ್ ನೀಡುವ ಆಮಿಷ ಒಡ್ಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ ಈತ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಬಾಲಕಿ ಮನೆಗೆ ಹಿಂದಿರುಗದಿದ್ದಾಗ ಅವಳನ್ನು ಹುಡುಕಲು ಪ್ರಾರಂಭಿಸಿದ್ದರು. ನಂತರ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು.
ಜನವರಿ 23 ರ ಬೆಳಗ್ಗೆ ಹೊಲವೊಂದರಲ್ಲಿ 6 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಬಾಲಕಿಯ ಬಟ್ಟೆಗಳು ದೇಹದ ಬಳಿ ಬಿದ್ದಿದ್ದವು, ಅಷ್ಟೇ ಅಲ್ಲದೇ ಬಾಲಕಿಯ ಕಣ್ಣುಗಳೂ ನಾಪತ್ತೆಯಾಗಿದ್ದವು! ಈಗ ಈ ಕಾಮುಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.