ನನ್ನ ಹತ್ತಿರ ಹಣ ಕಾಸೂ ಇಲ್ಲ. ಒಂದು ಸಣ್ಣ ಸೈಟು ನನ್ನ ಹೆಸರಿನಲ್ಲಿ ಇದೆ. ನನ್ನ ಗಂಡ ನನ್ನನ್ನು ಬಿಟ್ಟು ಹೋಗಿ ನಾಲ್ಕು ವರ್ಷ ಆಯಿತು. ಅವರು ನನ್ನನ್ನು ಕಸಕ್ಕಿಂತ ಕಡೆಯಾಗಿ ನೋಡುತ್ತಿದ್ದಾರೆ. ಅವರ ಹೆಸರಿನಲ್ಲಿರುವ ಮನೆಯಲ್ಲಿ ನಾನಿದ್ದೇನೆ. ನನಗೆ ಯಾರೂ ಇಲ್ಲ. ಬೇಕಿದ್ದರೆ ಸಂಸಾರಕ್ಕೆ ನಾಲ್ಕು ಕಾಸು ಕೊಡುತ್ತೇನೆ ಎನ್ನುತ್ತಿದ್ದಾರೆ. ನನ್ನ ಕಾಯಿಲೆಯ ಖರ್ಚು ನೋಡುವವರು ಯಾರು? ನನ್ನ ಜೊತೆಗೆ ಇದ್ದು ನನ್ನ ಯೋಗ ಕ್ಷೇಮ ನೋಡುವವರು ಯಾರು. ಈಗ ಇವೆಲ್ಲಾ ಮಾಡಬೇಕು ಎಂದು ಗಂಡನ ಮೇಲೆ ಕೇಸು ಹಾಕಲು ಆಗುತ್ತೆಯೇ? ಯಾರ ಮಾತಿಗೂ ಅವರು ಬಗ್ಗುತ್ತಿಲ್ಲ.
ಉತ್ತರ: ನೀವು ಕಾಯಿಲೆಯಿಂದ ಬಳಲುತ್ತಿರುವಾಗ ನಿಮ್ಮನ್ನು ನಿಮ್ಮ ಗಂಡ ಪೋಷಿಸಬೇಕಾದದ್ದು ಅವನ ಕರ್ತವ್ಯ ಆಗಿರುತ್ತದೆ. ಅವರ ವಿರುದ್ಧ ನೀವು ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ಡಿ.ವಿ ಕೇಸ್ ದಾಖಲಿಸಬಹುದು.
ನನ್ನ ಗಂಡ ಬಂದು ನನ್ನ ಜೊತೆ ಇದ್ದು ದಾಂಪತ್ಯ ಜೀವನದ ಪೂರ್ವ ಹಕ್ಕುಗಳ ಪುನರ್ ಸ್ಥಾಪನೆ ಆಗುವಂತೆ ಆದೇಶ ಕೊಡಬೇಕು ಎಂದೂ ಸಹ ನೀವು ಹಿಂದೂ ವಿವಾಹ ಕಾಯ್ದೆಯ ಕಲಂ 9ರ ಕೆಳಗೆ ಪ್ರಕರಣ ಸಲ್ಲಿಸ ಬಹುದು. ನ್ಯಾಯಾಲಯದ ಮೂಲಕ ಹೋದರೆ ನಿಮಗೆ ಇಂತಿಷ್ಟು ಎಂದು ಹಣ ಕೊಡಬೇಕು ಎಂದು ಮಧ್ಯಂತರ ಆದೇಶ ಮಾಡಬಹುದೇ ಹೊರತು, ನಿಮ್ಮ ಜೊತೆಗೆ ಬಂದು ಆತ ಇದ್ದು ನಿಮ್ಮ ಯೋಗ ಕ್ಷೇಮವನ್ನು ನೀವು ಇಷ್ಟಪಡುವ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಮಧ್ಯಂತರ ಆದೇಶವನ್ನು ನ್ಯಾಯಾಲಯದಿಂದ ನೀವು ಪಡೆಯುವುದು ಬಹುಷ: ಸಾಧ್ಯವಾಗಲಾರದು. ಒಂದು ವೇಳೆ ಆದೇಶ ಆದರೂ, ಅದರ ಮೇಲೆ ಅಪೀಲು ಕ್ರಮ ಎಲ್ಲ ಮುಗಿಯಲು ಬಹಳ ಕಾಲ ಬೇಕಾಗುತ್ತದೆ.
ಅದಕ್ಕೆ ಬದಲಾಗಿ ನೀವು ಎರಡು ಕ್ರಮಗಳನ್ನು ಅನುಸರಿಸಬಹುದು. ನಿಮ್ಮ ಊರಿನ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಕ್ಕೆ ನಿಮಗೂ ನಿಮ್ಮ ಪತಿಗೂ ಮಧ್ಯೆ ದಾಂಪತ್ಯ ಜೀವನದ ಕೆಲವು ಸಮಸ್ಯೆಗಳು ಇವೆ. ಅದನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸಿ ಕೊಡಿ ಎಂದು ಮಾತ್ರ ತಿಳಿಸಿ ಅರ್ಜಿ ಯನ್ನು ಕೊಡಿ. ಅವರು ನಿಮ್ಮಿಬ್ಬರನ್ನೂ ಕರೆಯಿಸಿ ಮಧ್ಯಸ್ಥಿಕೆಯ ಮೂಲಕ ನಿಮ್ಮ ಸಮಸ್ಯೆ ಪರಿಹಾರವಾಗಲು ಸಹಾಯ ಮಾಡುತ್ತಾರೆ.
ನಿಮ್ಮ ಪತಿ ಮಧ್ಯಸ್ಥಿಕೆಯಲ್ಲಿ ನಿಮ್ಮ ಇಷ್ಟದಂತೆ ನಡೆದುಕೊಳ್ಳಲು ಒಪ್ಪಲೂ ಬಹುದು. ಒಪ್ಪದೆಯೂ ಇರಬಹುದು. ಒಪ್ಪದಿದ್ದರೆ ಆಗ ವಿಧಿ ಇಲ್ಲದೇ ಪ್ರಕರಣ ದಾಖಲಿಸಿ. ಒಪ್ಪಿದರೆ ನಿಮಗೆ ತಕ್ಷಣವೇ ಪರಿಹಾರ ಸಿಗುತ್ತದೆ. ಶೀಘ್ರ ಪರಿಹಾರಕ್ಕೆ ಮಧ್ಯಸ್ಥಿಕೆಯೇ ಉತ್ತಮ.