ನ್ಯೂಸ್

ಬುದ್ಧಗಯಾ, ಅಯೋಧ್ಯೆ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ಮಹಿಳೆ ಕಣ್ಣು- ಎಲ್ಲೆಡೆ ಕಟ್ಟೆಚ್ಚರ

suchetana

ನವದೆಹಲಿ: ಉಗ್ರರ ದಾಳಿ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಬರುವುದು ಕೈಯಲ್ಲಿ ಬಂದೂಕು ಹಿಡಿದು, ಹೆಚ್ಚೆಂದರೆ ಮುಸುಕು ಧರಿಸಿರುವ ಪುರುಷರು. ಆದರೆ ಮಹಿಳೆಯರು ಇಂದು ಉತ್ತಮೋತ್ತಮ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದೂ ಅಲ್ಲದೇ, ಉಗ್ರ ಸಂಘಟನೆಯ ನೇತೃತ್ವವನ್ನೂ ವಹಿಸುತ್ತಿದ್ದಾರೆ ಎನ್ನುವಂಥ ಭಯಾನಕ ಸತ್ಯವನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಬಯಲಿಗೆ ಎಳೆದಿವೆ.

ಅಯೋಧ್ಯೆ, ಬುದ್ಧಗಯಾ, ದೆಹಲಿಯ ಪ್ರಮುಖ ಸ್ಥಳಗಳೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್​ ಹಾಕುತ್ತಿರುವ ಉಗ್ರ ಸಂಘಟನೆಯೊಂದರ ಕೃತ್ಯಗಳನ್ನು ಗುಪ್ತಚರ ಸಂಸ್ಥೆ ಕಂಡುಹಿಡಿದಿದೆ. ಆಶ್ಚರ್ಯದ ಸಂಗತಿ ಎಂದರೆ ಈ ಸಂಘಟನೆಯ ನೇತೃತ್ವ ವಹಿಸಿರುವುದು ಓರ್ವ ಮಹಿಳೆ.

ಮ್ಯಾನ್ಮಾರ್‌ನಲ್ಲಿ ಉಗ್ರ ಚಟುವಟಿಕೆಗಳ ಕುರಿತಾಗಿ ವಿಶೇಷ ತರಬೇತಿ ಪಡೆದಿರುವ ಈಕೆ ನಡೆಸಲು ಉದ್ದೇಶಿಸಿರುವ ವಿಧ್ವಂಸಕ ಕೃತ್ಯಗಳ ಸುಳಿವು ಸಿಕ್ಕಿದ್ದು, ಇದಾಗಲೇ ಎಲ್ಲ ರಾಜ್ಯಗಳಿಗೆ, ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ, ಪಂಜಾಬ್‌ ಸರಕಾರಗಳಿಗೆ ಶನಿವಾರ ರಾತ್ರಿಯೇ ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್​ ಮಾಡುವಂತೆ ಈ ರಾಜ್ಯಗಳ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ.

ಇದಾಗಲೇ ಈ ಮಹಿಳೆ ನೇತೃತ್ವದ ಸಂಘಟನೆ ಎಲ್ಲೆಲ್ಲಿ ಸ್ಕೆಚ್​ ಹಾಕಿದೆ ಎಂಬ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಗುಪ್ತಚರ ಸಂಸ್ಥೆ, ಅಯೋಧ್ಯೆ, ಬುದ್ಧಗಯಾ. ಪಶ್ಚಿಮ ಬಂಗಾಲದ ಪ್ರಮುಖ ನಗರಗಳು ಹಾಗೂ ಶ್ರೀನಗರಗಳ ದಾಳಿಗಳ ವಿವರಗಳನ್ನು ಕಲೆ ಹಾಕಿದೆ.

ಭಾರತದಲ್ಲಿ ದುಷ್ಕೃತ್ಯ ನಡೆಸಲು ಮಲೇಷಿಯಾ ಮೂಲದ ಸಂಸ್ಥೆಯಿಂದ 2 ಲಕ್ಷ ಡಾಲರ್‌ ಮೊತ್ತ ವರ್ಗಾವಣೆಯಾಗಿರುವುದನ್ನು ಗುಪ್ತಚರ ಇಲಾಖೆ ಕಂಡುಬಿಡಿದಿದೆ. ಕೌಲಾಲಂಪುರದಲ್ಲಿರುವ ರೊಹಿಂಗ್ಯಾ ಮುಸ್ಲಿಮರ ನಾಯಕ ಮೊಹಮ್ಮದ್‌ ನಾಸಿರ್‌ ಮತ್ತು ವಿವಾದಿತ ಧಾರ್ಮಿಕ ನಾಯಕ ಜಾಕೀರ್‌ ನಾಯ್ಕಗೆ ಮೊತ್ತ ಸಂದಾಯವಾಗಿದೆ. ಇಷ್ಟೇ ಅಲ್ಲದೇ, ಚೆನ್ನೈಯಲ್ಲಿರುವ ಹವಾಲಾ ಜಾಲ ನಿರ್ವಹಿಸುವ ವ್ಯಕ್ತಿಯೊಬ್ಬನಿಗೂ ಆಂಶಿಕ ಮೊತ್ತ ಪಾವತಿಯಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.