ನ್ಯೂಸ್

ಪುರುಷರ ಜತೆ ಸಂಸಾರ ಮಾಡಲು ಇಷ್ಟವಿಲ್ಲ: ಗಂಡನ ಮನೆಯಿಂದ ಹಣ ದೋಚಿ ನವವಿವಾಹಿತೆಯರು ಎಸ್ಕೇಪ್‌

ತ್ರಿಶೂರ (ಕೇರಳ): ಮಹಿಳೆ ಮಹಿಳೆಯ ಜತೆ, ಪುರುಷ ಪುರುಷನ ಜತೆ ನೆಲೆಸಲು ಇಷ್ಟಪಡುವ ಸಲಿಂಗಕಾಮದ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಅಂಥದ್ದೇ ಒಂದು ಘಟನೆ ಕೇರಳದ ತ್ರಿಶೂರ್‌ನಲ್ಲಿಯೂ ನಡೆದಿದೆ.ಮದುವೆಯಾದ ಮರುದಿನವೇ ಯುವತಿ ಗಂಡನ ಮನೆಯಿಂದ ಎಸ್ಕೇಪ್‌ ಆಗಿದ್ದಾಳೆ.

23 ವರ್ಷದ ಯುವತಿಯ ಮದುವೆ ಕೆಲ ದಿನಗಳ ಹಿಂದೆ ತ್ರಿಶೂರ್‌ನ ಯುವಕನ ಜತೆ ಆಗಿದೆ. ಮದುವೆಯಾದ ಮರುದಿನ ಆಕೆ ನಾಪತ್ತೆಯಾಗಿದ್ದಾಳೆ. ಮನೆಯಲ್ಲಿ ವಧು ಇಲ್ಲದ್ದನ್ನು ಗಮನಿಸಿದ ಮನೆಯವರು ಎಲ್ಲೆಡೆ ಹುಡುಕಾಡಿ ಪೊಲೀಸರಿಗೆ ದೂರು ದಾಖಲು ಮಾಡಿದ್ದಾರೆ.

ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸುತ್ತಿರುವಾಗಲೇ ಇನ್ನೊಂದು ಠಾಣೆಯಲ್ಲಿ ಇನ್ನೋರ್ವ ನವವಿವಾಹಿತೆ ಹೀಗೆಯೇ ಮನೆಯಿಂದ ಕಾಣೆಯಾಗಿರುವುದು ತಿಳಿದಿದೆ. ಎರಡೂ ಘಟನೆಗಳಲ್ಲಿ ಇಬ್ಬರೂ ಯುವತಿಯರು ಗಂಡನ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿರುವುದು ತಿಳಿದಿದೆ.

ನಂತರ ಪೊಲೀಸರು ತನಿಖೆ ನಡೆಸಿದಾಗ ಇಬ್ಬರೂ ಯುವತಿಯರು ಒಟ್ಟಿಗೇ ಸಿಕ್ಕಿಬಿದ್ದಿದ್ದಾರೆ. ಈ ನಡುವೆಯೇ ಮದುವೆಯಾದ ಮರುದಿನವೇ ಪತ್ನಿ ಕಾಣೆಯಾಗಿದ್ದನ್ನು ಸಹಿಸಿಕೊಳ್ಳಲಾಗದ ವರನಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಂತರ ಯುವತಿಯರನ್ನು ಹಿಡಿದು ವಿಚಾರಿಸಿದಾಗ ತಾವಿಬ್ಬರೂ ಸ್ನೇಹಿತೆಯರು. ಒಟ್ಟಿಗೇ ಇರಲು ನಿರ್ಧರಿಸಿದ್ದೆವು. ಆದರೆ ನಮ್ಮ ಬಳಿ ಹಣ ಇರಲಿಲ್ಲ. ಈ ನಡುವೆಯೇ ನಮ್ಮಿಬ್ಬರ ಮನೆಯಲ್ಲಿಯೂ ಮದುವೆಗೆ ರೆಡಿ ಮಾಡಿದ್ದರು. ಆದ್ದರಿಂದ ಗಂಡನ ಮನೆಯಲ್ಲಿರುವ ಹಣ, ಚಿನ್ನ ದೋಚಲು ನಿಟ್ಟಿನಲ್ಲಿ ಮದುವೆಗೆ ಒಪ್ಪಿಕೊಂಡೆವು. ಮೊದಲೇ ಮಾಡಿರುವ ಪ್ಲ್ಯಾನ್‌ ನಂತೆ ಇಬ್ಬರೂ ಮನೆಬಿಟ್ಟು ಬಂದಿದ್ದೇವೆ. ಪುರುಷರ ಜತೆ ಸಂಸಾರ ಮಾಡಲು ನಮಗೆ ಇಷ್ಟವಿಲ್ಲ ಎಂದಿದ್ದಾರೆ.

ಇವರಿಬ್ಬರೂ ಮೊದಲೇ ಚೆನ್ನೈಗೆ ರೈಲು ಟಿಕೆಟ್ ಬುಕ್ ಮಾಡಿದ್ದರು. ಆದರೆ ಪೊಲೀಸರ ಕೈಯಲ್ಲಿ ಸುಲಭದಲ್ಲಿ ಸಿಕ್ಕಿ ಬೀಳುವ ಭಯದಿಂದ ಬಸ್ ಮೂಲಕ ಕೊಟ್ಟಾಯಂಗೆ ಹೋಗಿ ಅಲ್ಲಿಂದ ಚೆನ್ನೈಗೆ ರೈಲಿನಲ್ಲಿ ಹೋಗಿದ್ದರು. ಅಲ್ಲಿ ಹೋಟೆಲ್‌ ಒಂದರಲ್ಲಿ ಉಳಿದುಕೊಂಡಿದ್ದರು. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.