ನ್ಯೂಸ್

ಆಮೀರ್​ಗೆ 'ಅಸಹಿಷ್ಣತೆ' ಕೊಟ್ಟ ಶಾಕ್​: ಛಡ್ಡಾಗೆ ಬೈಕಾಟ್​ ಬಿಸಿ, ಬೆಂಬಲಿಸಿದ ಅಕ್ಷಯ್​ಗೂ ಸಂಕಟ- ಬಿಡುಗಡೆ ದಿನವೇ ನಿರಾಸೆ

ಮುಂಬೈ: ಬಾಲಿವುಡ್​ನ ಖ್ಯಾತ ನಟ ಆಮೀರ್​ ಖಾನ್​ ಸದ್ಯ ಬೈಕಾಟ್​ ಬಿಸಿ ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಅಸಹಿಷ್ಣತೆ ಇದೆ ಎನ್ನುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ ನಟ, ದೇವರಿಗೆ ಹಾಲಿನ ಅಭಿಷೇಕ ಮಾಡುವ ಬದಲು ಅದೇ ಹಾಲನ್ನು ಬಡಮಕ್ಕಳಿಗೆ ನೀಡಿ ಎನ್ನುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇವಿಷ್ಟೇ ಅಲ್ಲದೇ, ಇವರು ಹಿಂದೆ ನಟಿಸಿದ್ದ ಪಿಕೆ ಚಿತ್ರದಲ್ಲಿ ಹಿಂದೂ ದೇವತೆಯನ್ನು ಅವಮಾನ ಮಾಡಿದ್ದಾರೆ ಎಂದು ಆಕ್ರೋಶವೂ ವ್ಯಕ್ತವಾಗಿತ್ತು.


ಇವೆಲ್ಲವುಗಳಿಂದ ಹಿಂದೂ ಸಮುದಾಯದಿಂದ ಬಹಿಷ್ಕಾರದ ಬಿಸಿ ಅನುಭವಿಸುತ್ತಿದ್ದ ಆಮೀರ್​ ಖಾನ್​ ನಂತರ ಸಾಮಾಜಿಕ ಮಾಧ್ಯಮಗಳ ಮುಂದೆ ಬಂದು, ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ನನಗೆ ಭಾರತ ಎಂದರೆ ತುಂಬಾ ಅಭಿಮಾನವಿದೆ, ದಯವಿಟ್ಟು ನನ್ನ ಚಿತ್ರಗಳಿಗೆ ಬೈಕಾಟ್​ ಹಾಕಬೇಡಿ ಎಂದು ಗೋಗರೆದಿದ್ದರು. ಆದರೆ ಇವರ ಈ ಮಾತುಗಳು ಭಾರತೀಯರ ಮನಮುಟ್ಟುವಲ್ಲಿ ವಿಫಲವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ ಇಂದು ಬಿಡುಗಡೆಯಾದ ಅವರ ಚಿತ್ರ ಲಾಲ್​ ಸಿಂಗ್​ ಛಡ್ಡಾ.

ನಿಜವಾದ ಭಾರತೀಯರು ಯಾರೂ ಈ ಚಿತ್ರವನ್ನು ನೋಡಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ #BoycottLaalSinghChaddha ಹ್ಯಾಶ್​​ ಟ್ಯಾಗ್​ ಟ್ರೆಂಡ್​ ಆಗಿದೆ. ಅದರ ಫಲಶ್ರುತಿ ಎಂಬಂತೆ ಮೊದಲ ದಿನ ನಿರಾಸೆ ತಂದಿದೆ. ಇಂದು ಈ ಚಿತ್ರ ವಿಶ್ವಾದ್ಯಂತ ಪ್ರದರ್ಶನಗೊಂಡಿದೆ. ಚಿತ್ರದ ಬಾಕ್ಸ್​ ಆಫೀಸ್​ ಮೇಲೆ ನೆಗೆಟಿವ್​ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿತ್ತು. ಅದರಂತೆಯೇ ಮೊದಲ ದಿನ ಚಿತ್ರ ಭಾರಿ ನಿರಾಸೆಯ ಫಲವನ್ನು ಕಂಡಿದೆ. ಆಮೀರ್​ ಖಾನ್​ ಮತ್ತು ಕರೀನಾ ಕಪೂರ್​ ಖಾನ್​ ಅಭಿನಯಿಸಿರುವ ಈ ಚಿತ್ರದ ಮುಂಗಡ ಬುಕಿಂಗ್​ ಶೇ.12-15ರಷ್ಟಕ್ಕೆ ಸೀಮಿತವಾಗಿದೆ.

ಆಮೀರ್​ ಖಾನ್​ ಅವರು ಭಾರತದ ಪರವಾಗಿ ಇದ್ದಾರೆ, ಅವರನ್ನು ಬೆಂಬಲಿಸಿ ಎಂದು ಇತ್ತ ನಟ ಅಕ್ಷಯ್​ ಕುಮಾರ್​ ಅವರೂ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ನಡೆಸಿದ್ದರು. ಅವರ ಚಿತ್ರ ರಕ್ಷಾಬಂಧನ್​ ಕೂಡ ಇಂದು ಬಿಡುಗಡೆಯಾಗಿದ್ದು, ಅದಕ್ಕೇನು ಬೈಕಾಟ್​ ಮಾಡಿರಲಿಲ್ಲ. ಆದರೆ ಈ ಚಿತ್ರ ಕೂಡ ಮೊದಲ ದಿನ ಭಾರಿ ನಿರಾಸೆಯ ಪ್ರದರ್ಶನ ಕಂಡಿದೆ. ಈ ಚಿತ್ರದ ಮುಂಗಡ ಬುಕಿಂಗ್​ ಕೂಡ ಲಾಲ್​ ಸಿಂಗ್​ ಛಡ್ಡಾದಂತೆಯೇ ಆಗಿದ್ದು, ನಿರ್ಮಾಪಕರಿಗೆ ತಲೆಬಿಸಿಯಾಗಿರುವುದಾಗಿ ವರದಿಯಾಗಿದೆ.

ಭಾರತದಲ್ಲಿ ನೆಲೆಸಿ, ಇಲ್ಲಿಯ ಅನ್ನವನ್ನುಂಡು ಭಾರತವನ್ನೇ ಧಿಕ್ಕರಿಸುವವರಿಗೆ ಹಾಗೂ ಅಂಥವರಿಗೆ ಸಹಕರಿಸುವವರಿಗೆ ನಿಜವಾದ ಭಾರತೀಯರು ಇದೇ ರೀತಿ ಪಾಠ ಕಲಿಸುವುದು ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಈಗ ಪುನಃ ಹರಿದಾಡುತ್ತಿದೆ. (ಏಜೆನ್ಸೀಸ್​)