ನ್ಯೂಸ್

ಒಬ್ಬ ಮಗನ ವಿರುದ್ಧ ಡ್ರಗ್ಸ್​ ಕೇಸ್​, ಇನ್ನೊಬ್ಬನದ್ದು ರೇಪ್​ ಕೇಸ್​: ಅಂತೂ ರಾಜೀನಾಮೆ ನೀಡಿದ ಕೋಡಿಯೇರಿ

suchetana

ತಿರುವನಂತಪುರ: ಕೇರಳದ ಮಾಜಿ ಸಚಿವ ಹಾಗೂ ರಾಜ್ಯ ಮಾರ್ಕ್ಸ್​ವಾದಿ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್ ಕೊನೆಗೂ ರಾಜೀನಾಮೆ ನೀಡಿದ್ದಾರೆ.

ಕೇರಳದ ಅತ್ಯಂತ ಪ್ರಭಾವಶಾಲಿ ಕಮ್ಯೂನಿಸ್ಟ್ ಮುಖಂಡರಲ್ಲೊಬ್ಬರೆನಿಸಿರುವ ಕೋಡಿಯೇರಿ ಬಾಲಕೃಷ್ಣನ್ ಅವರ ಮಗ ಬಿನೀಶ್​ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್ ಕೇಸ್​ನಲ್ಲಿ ಮಗ ಅರೆಸ್ಟ್​ ಆಗಿದ್ದರು. ಬಿನೀಶ್​ ಅವರನ್ನು ಅಕ್ಟೋಬರ್​ 19ರಂದು ಬಂಧಿಸಲಾಗಿದೆ.

ಡ್ರಗ್ ಪೆಡ್ಲರ್​ ಮೊಹಮ್ಮದ್​ ಅನೂಪ್​ ಅವರ ನಿವಾಸದಲ್ಲಿ ಬಿನೀಶ್​ ಅವರ ಡೆಬಿಟ್​ ಕಾರ್ಡ್​ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ಇದಾದ ಮೇಲೆ ಕೋಡಿಯೇರಿ ಅವರಿಗೆ ಸರ್ಕಾರ ರಜೆ ನೀಡಿ ಕಳುಹಿಸಿತ್ತು. ಆರೋಗ್ಯ ಹದಗೆಟ್ಟಿರುವ ಕಾರಣಕ್ಕೆ ರಜೆ ನೀಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಇದರ ವಿರುದ್ಧ ಆನೇಕ ಆರೋಪಗಳು ಕೇಳಿಬಂದಿದ್ದು, ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.

ಬಿನೀಶ್​ ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿಕೊಂಡಿದ್ದರೆ, ಕೋಡಿಯೇರಿ ಬಾಲಕೃಷ್ಣನ್ ಅವರ ಇನ್ನೋರ್ವ ಪುತ್ರ ಬಿನೋಯ್ ಬಾಲಕೃಷ್ಣನ್​ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆ. ಮುಂಬೈನ ಮಾಜಿ ಬಾರ್ ಡ್ಯಾನ್ಸರ್ ಮಹಿಳೆಯೊಬ್ಬಳು ಅತ್ಯಾಚಾರದ ದೂರು ದಾಖಲಿಸಿದ್ದಳು.

ಮದುವೆಯಾಗುತ್ತೇನೆಂದು ಭರವಸೆ ನೀಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಗರ್ಭವತಿ ಮಾಡಿ ವಂಚಿಸಿದನೆಂದು ಆಕೆ ಆರೋಪ ಮಾಡಿದ್ದಾಳೆ. ಆದರೆ, ಮುಂಬೈ ಕೋರ್ಟ್​ವೊಂದರ ಆದೇಶದಂತೆ ಆಕೆಯ ಮಗುವಿನ ಅಪ್ಪನ ಪತ್ತೆಗೆ ಡಿಎನ್​ಎ ಪರೀಕ್ಷೆ ನಡೆಸಲಾಗಿತ್ತು. ಆದರೆ ವಿಚಿತ್ರ ಎಂದರೆ ಪರೀಕ್ಷೆ ನಡೆದು ಎರಡು ವರ್ಷವಾದರೂ ಇನ್ನೂ ವರದಿ ಬಂದಿಲ್ಲ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಯ ನಂತರ ಅವರನ್ನು ರಜೆಯ ಮೇಲೆ ಕಳುಹಿಸಲಾಗಿತ್ತು. ಸರ್ಕಾರ ಅವರನ್ನು ಪೋಷಿಸುತ್ತಿದೆ ಎಂಬ ಟೀಕೆಗಳು ಕೇಳಿಬಂದಿದ್ದವು.

ಇದೀಗ ತಮ್ಮ ಹುದ್ದೆಗೆ ಕೋಡಿಯೇರಿ ರಾಜೀನಾಮೆ ನೀಡಿದ್ದು. ಇದಕ್ಕೆ ಅನಾರೋಗ್ಯದ ಕಾರಣ ನೀಡಿದ್ದಾರೆ. ಲಾಕ್​ಡೌನ್​ಗೆ ಮುನ್ನ ಅವರು ಅಮೆರಿಕದಲ್ಲಿ ಮೂರು ವಾರ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು. ಬಾಲಕೃಷ್ಣನ್ ಅವರು ಕೆಲ ಸಮಯದ ಹಿಂದೆ ಕ್ಯಾನ್ಸರ್​ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

ಕೋಡಿಯೇರಿ ಬಾಲಕೃಷ್ಣನ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಎಲ್​ಡಿಎಫ್ ಸಂಚಾಲಕ ಹಾಗೂ ಮಾಜಿ ಸಂಸದ ಎ ವಿಜಯರಾಘವನ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯಾಗಿ ವಹಿಸಲಾಗಿದೆ.

ಅಂದಹಾಗೆ ಬಾಲಕೃಷ್ಣನ್​ ಅವರು 2015ರಿಂದಲೂ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. 2001ರಿಂದ ಅವರು ಪಕ್ಷದ ಉನ್ನತ ಹುದ್ದೆಗಳನ್ನ ನಿರ್ವಹಿಸಿದ್ದಾರೆ. 2006ರಿಂದ 2011ರವರೆಗೆ ಅವರು ಅಚ್ಯುತಾನಂದನ್ ಅವರ ಸಂಪುಟದಲ್ಲಿ ಗೃಹ ಖಾತೆ ಮತ್ತು ಪ್ರವಾಸೋದ್ಯಮ ಖಾತೆಯ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.