ನ್ಯೂಸ್

ಕಾಶ್ಮೀರ ಪಾಕ್‌ಗೆ, ಅರುಣಾಚಲಪ್ರದೇಶ ಚೀನಾಗೆ! ವಿಶ್ವ ಆರೋಗ್ಯ ಸಂಸ್ಥೆ ವೆಬ್‌ಸೈಟ್‌ನಲ್ಲಿ ಎಡವಟ್ಟು? ಪ್ರಧಾನಿಗೆ ಪತ್ರ

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ವೆಬ್‌ಸೈಟ್‌ನಲ್ಲಿ ಭಾರತದ ನಕಾಶೆ ತಪ್ಪಾಗಿ ಗುರುತಿಸಲಾಗಿದ್ದು, ಕೂಡಲೇ ಆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸಂತಾನು ಸೇನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಈ ವೆಬ್‌ಸೈಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶವನ್ನು ಪಾಕಿಸ್ತಾನ ಮತ್ತು ಚೀನಾದ ಭಾಗವೆಂದು ತಪ್ಪಾಗಿ ತೋರಿಸಲಾಗಿದೆ. ಈ ಬಗ್ಗೆ ಆರೋಗ್ಯ ಸಂಸ್ಥೆಯ ಗಮನಕ್ಕೆ ತರಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ನಾನು 'WHO COVID-19' ವೆಬ್​ಸೈಟ್​ ಅನ್ನು ಕ್ಲಿಕ್​ ಮಾಡಿದ್ದೆ. ಅದರಲ್ಲಿರುವ ವಿಶ್ವ ಭೂಪಟದಲ್ಲಿ ಭಾರತದ ಭಾಗವನ್ನು ಹತ್ತಿರದಿಂದ ನೋಡಿದಾಗ ಈ ಎಡವಟ್ಟು ಕಾಣಿಸಿದೆ. ಮಾತ್ರವಲ್ಲದೇ ಕರೊನಾ ಅಂಕಿ - ಅಂಶ ಬೇರೆ ಬೇರೆಯಾಗಿ ತೋರಿಸುತ್ತಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ಇದರ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಸೇನ್‌ ಪತ್ರದಲ್ಲಿ ತಿಳಿಸಿದ್ದಾರೆ.

ಈ ರೀತಿ ತಪ್ಪಾಗಿರುವುದು ಅಕ್ಷಮ್ಯ. ಇದು ಅಂತಾರಾಷ್ಟ್ರೀಯ ಸಮಸ್ಯೆಯಾಗಿದೆ. ಸರ್ಕಾರವು ಈ ವಿಚಾರದಲ್ಲಿ ಹೆಚ್ಚು ಜಾಗರೂಕತೆಯಿಂದ ಇರಬೇಕು. ಸಮಸ್ಯೆ ದೊಡ್ಡದಾಗುವ ಮೊದಲೇ ಕ್ರಮ ತೆಗೆದುಕೊಳ್ಳಬೇಕು. ಇಷ್ಟು ದೊಡ್ಡ ತಪ್ಪನ್ನು ಇಷ್ಟು ದಿನ ಹೇಗೆ ನಿರ್ಲಕ್ಷಿಸಲಾಯಿತು ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.