ನವದೆಹಲಿ: ದೇಶದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಂದು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸುಮಾರು ಒಂದೂವರೆ ಗಂಟೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತುಕತೆ ನಡೆಸಿದರು.
ಕೋವಿಡ್ ಯಶಸ್ವಿಯಾಗಿ ನಿರ್ವಹಿಸಿ ಪಕ್ಷ ಸಂಘಟನೆ ಬಲಪಡಿಸಿ ಎಂದು ಅವರು ಸೂಚನೆ ನೀಡಿದರು. ಕೋವಿಡ್ ಯಶಸ್ವಿಯಾದರೆ ಪಕ್ಷಕ್ಕೆ ಲಾಭದ ಜತೆಗೂ ಸಂಘಟನೆಗೂ ಲಾಭ. ಇದನ್ನು ಸರಿಯಾಗಿ ನಿರ್ವಹಿಸಬೇಕಿದೆ. ಇದು ವಿಫಲವಾದರೆ ಪ್ರತಿಪಕ್ಷಗಳ ಬಾಯಲ್ಲಿ ಇದು ಅಸ್ತ್ರವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿರುವ ಸಹಕಾರದ ಬಗ್ಗೆ ಮಾಹಿತಿ ನೀಡಿದರು. ಸೋಮವಾರದಿಂದ (ಜೂನ್ 21) ನಡೆಯಲಿರುವ ಲಸಿಕೆ ಮೇಳದ ಬಗ್ಗೆ ಮಾಹಿತಿ ನೀಡಿದ ನಡ್ಡಾ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸಿ. ಜೂನ್ 21ರ ಯೋಗ ದಿನಾಚರಣೆ ಪ್ರಯುಕ್ತ ಲಸಿಕೆ ಮೇಳ ಮಾಡಬೇಕು. ಇದನ್ನ ಯಶಸ್ವಿಗೊಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕೋವಿಡ್ ಸಂಕಷ್ಟ ಸಮಯದಲ್ಲಿ ಕಾರ್ಯಕರ್ತರು ಜನರ ಜತೆ ಇರಬೇಕು, ಬೂತ್ ಮಟ್ಟಕ್ಕೆ ಕಾರ್ಯಕ್ರಮಗಳು ಮುಟ್ಟಬೇಕು, ವ್ಯಾಕ್ಸಿನೇಷನ್ ಎಲ್ಲರಿಗೂ ಸಿಗುವ ಕೆಲಸ ಆಗಬೇಕಿದೆ ಎಂದು ಹೇಳಿದರು. ಕರೊನಾ ನಿರ್ವಹಣೆ ಜತೆ ಜತೆಗೆ ಪಕ್ಷ ಸಂಘಟನೆ ಮರೆಯುವುದು ಬೇಡ. ಕರೊನಾ ಮುಂದಿನ ಚುನಾವಣೆಗಳಲ್ಲಿ ಪ್ರಮುಖ ಅಸ್ತ್ರವಾಗುತ್ತೆ ಎಂದೂ ಅವರು ವಿವರಿಸಿದರು.