ನ್ಯೂಸ್

ಅಮೆರಿಕದ 231 ವರ್ಷಗಳಲ್ಲೇ ಹೊಸ ದಾಖಲೆ ಬರೆದ ಜಿಲ್ ಬೈಡೆನ್​

suchetana

ವಾಷಿಂಗ್ಟನ್​: ಜಗತ್ತಿನಾದ್ಯಂತ ಬಲು ಕುತೂಹಲ ಕೆರಳಿಸಿದ್ದ ಅಮೆರಿಕ ಚುನಾವಣೆಗೆ ಸಂಬಂಧಿಸಿದಂತೆ ಹಾಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಾಡಿರುವ ಸರ್ಕಸ್​ಗಳೆಲ್ಲವೂ ಮುಗಿದು, ಕೊನೆಗೂ ಅಧ್ಯಕ್ಷ ಪಟ್ಟ ಜೋ ಬೈಡೆನ್​ಗೆ ಒಲಿದಾಗಿದೆ. ಈ ಮೂಲಕ 46ನೆ ಅಧ್ಯಕ್ಷರಾಗಿ ಬೈಡೆನ್​ ಅಮೆರಿಕದ ಪ್ರಥಮ ಪ್ರಜೆಯಾಗಿ ಹೊರಹೊಮ್ಮಲು ಸಜ್ಜಾಗಿದ್ದರೆ, ಅವರ ಪತ್ನಿ ಪ್ರೊ. ಜಿಲ್​ ಬೈಡೆನ್​ ಪ್ರಥಮ ಮಹಿಳೆ (ಫಸ್ಟ್​ ಲೇಡಿ) ಎಂಬ ಬಿರುದು ಪಡೆಯಲಿದ್ದಾರೆ.

ಡಾ.ಜಿಲ್​ ಬೈಡೆನ್​ ಅವರು ಪ್ರಥಮ ಮಹಿಳೆ ಎಂಬ ಖ್ಯಾತಿ ಮಾತ್ರವಲ್ಲದೇ, ಇದರ ಜತೆಜತೆಗೇ ಇತಿಹಾಸವನ್ನೇ ಬರೆಯಲು ಹೊರಟಿದ್ದಾರೆ. ಅದೂ ಒಂದೆರಡಲ್ಲ, ಅಮೆರಿಕದ 231 ವರ್ಷಗಳ ಇತಿಹಾಸವದು!

ಜಿಲ್​ ಅವರು ಸದ್ಯ ವರ್ಜೀನಿಯಾ ಸಮುದಾಯ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಶೇಷ ಎಂದರೆ, ಅವರು ಇಡೀ ಅಮೆರಿಕದ ಪ್ರಥಮ ಮಹಿಳೆಯಾದ ಮೇಲೆಯೂ ಶಿಕ್ಷಕಿಯಾಗಿ ತಮ್ಮ ವೃತ್ತಿಯನ್ನು ಮುಂದುವರಿಸಲು ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಇಂಥದ್ದೊಂದು ನಿರ್ಧಾರ ಕೈಗೊಂಡಿರುವ ಏಕೈಕ ಮಹಿಳೆ ಎನಿಸಿಕೊಂಡಿದ್ದು, ದಾಖಲೆ ನಿರ್ಮಿಸಿದ್ದಾರೆ.

ವೇತನ ಪಡೆಯುವ ಉದ್ಯೋಗ ಹೊಂದಿರುವ ಏಕೈಕ ಪ್ರಥಮ ಮಹಿಳೆ ಹಾಗೂ ಮೊದಲ ಡಾಕ್ಟರೆಟ್ ಪದವೀಧರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅಮೆರಿಕದಲ್ಲಿ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದದ್ದು 1789ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಚುನಾಯಿತರಾಗಿರುವ ಯಾವುದೇ ಅಧ್ಯಕ್ಷರ ಪತ್ನಿ ಪ್ರಥಮ ಮಹಿಳೆಯ ಜತೆಗೆ ಬೇರೊಂದು ವೇತನ ಪಡೆಯುವ ಉದ್ಯೋಗದಲ್ಲಿ ಇರಲಿಲ್ಲ.

ಸಂಬಳಕ್ಕಾಗಿ ದುಡಿಯುವ ಅಮೆರಿಕದ ಪ್ರಥಮ ಮಹಿಳೆಯಾಗುವ ಗೌರವ ನನಗೆ ದೊರೆತಿದೆ. ಶಿಕ್ಷಕಿಯಾಗಿ ಸೇವೆ ಸಲ್ಲಿಸುವುದನ್ನು ನಾನು ಅತ್ಯಂತ ಪ್ರೀತಿಯಿಂದ ಕಾಣುತ್ತೇನೆ ಎಂದು ಸಹ ಹೇಳಿದ್ದಾರೆ. ಶ್ವೇತ ಭವನಕ್ಕೆ ಹೋದರೂ ನಾನು ಶಿಕ್ಷಕ ವೃತ್ತಿ ಬಿಡುವುದಿಲ್ಲ.

ಸಾರ್ವಜನಿಕರು ಶಿಕ್ಷಕರನ್ನು ಗೌರವಿಸಬೇಕು. ಅವರ ಕೊಡುಗೆಗಳ ಬಗ್ಗೆ ಅರಿತುಕೊಳ್ಳಬೇಕು ಮತ್ತು ಈ ವೃತ್ತಿಯನ್ನು ತೆಗೆದುಕೊಳ್ಳುವವರ ಸಂಖ್ಯೆಯನ್ನು ಹೆಚ್ಚಿಸಬೇಕು ಎನ್ನುವುದು ನನ್ನ ಆಸೆ. ಹಾಗೆ ಬರೀ ಮಾತಿನಿಂದ ಹೇಳಿದರೆ ಸಾಲದು, ಆದ್ದರಿಂದ ನಾನೇ ಉದಾಹರಣೆಯಾಗುವ ಮೂಲಕ ಶಿಕ್ಷಕ ವೃತ್ತಿಯ ಬಗ್ಗೆ ಗೌರವ ಮೂಡಿಸುವ ಪ್ರಯತ್ನ ಮಾಡುವೆ ಎಂದಿದ್ದಾರೆ.