ಕಾರಥೋಡ್ (ಕೇರಳ): ವಜ್ರದ ಸೌಂದರ್ಯಕ್ಕೆ ಮನಸೋಲದವರೇ ಇಲ್ಲವೆನ್ನಬಹುದು. ಸಾಮಾನ್ಯರ ಪಾಲಿಗೆ ವಜ್ರ ಎನ್ನುವುದು ಗಗನಕುಸುಮವೇ. ಆದರೆ ಹಲವು ಸೆಲೆಬ್ರಿಟಿಗಳಿಗೆ ಇದು ಸಾಮಾನ್ಯ ಉಡುಗೊರೆಯ ವಸ್ತು. ಅದೇನೆ ಇರಲಿ... ಇಲ್ಲಿ ಹೂವಿನಂತೆ ಮಿರಿಮಿರಿ ಮಿಂಚುತ್ತ ಲಲನೆಯ ಬೆರಳನ್ನು ಅಲಂಕರಿಸಿರುವ ಈ ವಜ್ರದ ಉಂಗುರವನ್ನೊಮ್ಮೆ ನೋಡಿಬಿಡಿ.
ಅಣಬೆಯಂತೆಯೂ ಕಾಣುವ ಈ ಉಂಗುರ ಈಗ ಗಿನ್ನೆಸ್ ದಾಖಲೆ ಪುಟ ಸೇರಿದೆ. ಇದಕ್ಕೆ ಕಾರಣ ಇದರಲ್ಲಿ ಬಳಸಿರುವ ವಜ್ರದ ಪ್ರಮಾಣ. 'ಎಸ್ಡಬ್ಲ್ಯುಎ ಡೈಮಂಡ್ಸ್' ಕಂಪೆನಿ ಕಳೆದ ಮೇ ತಿಂಗಳಿನಲ್ಲಿ ಕೇರಳದ ಕಾರಥೋಡ್‌ನಲ್ಲಿ ಈ ಉಂಗುರ ತಯಾರಿಸಿದೆ. ಅತಿ ಹೆಚ್ಚು ವಜ್ರಗಳ ಹರಳುಗಳನ್ನು ಇದು ಹೊಂದಿರುವ ಕಾರಣ, ವಿಶ್ವ ದಾಖಲೆಯಾಗಿದೆ.
ಈ ಉಂಗುರವು ಪಿಂಕ್ ಆಯ್ಸ್ಟರ್ ಮಶ್ರೂಮ್ (pink oyster mushroom) ಹೊಂದಿದೆ. ಈ ಉಂಗುರಕ್ಕೆ 'ಅಮಿ' ಎಂದು ಹೆಸರಿಸಲಾಗಿದೆ. ಅಮರತ್ವಕ್ಕಾಗಿ ಸಂಸ್ಕೃತದಲ್ಲಿ ಬಳಸುವ ಪದ ಇದು ಎಂದಿದ್ದಾರೆ ಇದರ ತಯಾರಕರು.
41 ದಳಗಳ ಅಣಬೆ ಉಂಗುರ ಇದಾಗಿದೆ. ತ್ರಿಡಿ ಮುದ್ರಣದಲ್ಲಿ ತಯಾರು ಮಾಡಲಾಗಿದೆ. ದ್ರವರೂಪದ ಚಿನ್ನವನ್ನು ಅಚ್ಚಿನಲ್ಲಿ ಸುರಿದು, ತಂಪಾಗಿಸಿ ಅಣಬೆ ದಳಗಳ ಒಟ್ಟಾರೆ ಆಕಾರಕ್ಕೆ ಈ ಉಂಗುರವನ್ನು ತರಲಾಗಿದೆ. ನೈಸರ್ಗಿಕ ವಜ್ರಗಳನ್ನು ಈ ಉಂಗುರದಲ್ಲಿ ಬಳಸಲಾಗಿದೆ ಎಂದಿದ್ದಾರೆ ಅವರು.
ಒಟ್ಟು 24,679 ವಜ್ರಗಳ ಹರಳುಗಳನ್ನು ಈ ಉಂಗುರದಲ್ಲಿ ಇರಿಸಲಾಗಿದೆ. ಇದು 2020ರಲ್ಲಿ ಹರ್ಷಿತ್ ಬನ್ಸಾಲ್ ಅವರು ತಯಾರಿಸಿದ್ದ ವಜ್ರದ ಉಂಗುರದ ದಾಖಲೆಯನ್ನು ಮುರಿದು ಹಾಕಿದೆ. ಈ ಉಂಗುರ 340 ಗ್ರಾಂ ತೂಗುತ್ತದೆ. ಅಂದಹಾಗೆ ಈ ಉಂಗುರದ ಬೆಲೆ 75 ಲಕ್ಷ ರೂಪಾಯಿ.