ನ್ಯೂಸ್

ದರ್ಗಾಕ್ಕೆ ಚಾದರ ಅರ್ಪಿಸಿ ಕೊಲೆಗೆ ಸ್ಕೆಚ್​: 11 ಇಂಚಿನ ಚಾಕು ಹಿಡಿದು ಗಡಿ ನುಸುಳಿ ಬಂದ​ ಪಾಕ್​ ಪ್ರಜೆ!

ಗಂಗಾನಗರ (ರಾಜಸ್ಥಾನ): ಹಿಂದೂ ದೇವತೆಗಳ ಕುರಿತು ಅವಹೇಳನಕಾರಿ ಮಾತನಾಡಿದ್ದನ್ನು ವಿರೋಧಿಸಿ ಬಿಜೆಪಿ ಮುಖಂಡೆ ನೂಪುರ್​ ಶರ್ಮಾ ಅವರು, ಪ್ರವಾದಿ ಮೊಹಮ್ಮದ್​ ಕುರಿತು ಮಾತನಾಡಿರುವ ವಿವಾದ ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ. ನೂಪುರ್​ ಅವರ ಹೇಳಿಕೆ ವಿರೋಧಿಸಿ ಇದಾಗಲೇ ಕಾಂಗ್ರೆಸ್ಸಿಗರು ಹಾಗೂ ಮುಸ್ಲಿಂ ರಾಷ್ಟ್ರಗಳು ಭಾರಿ ಪ್ರತಿಭಟನೆ ನಡೆಸಿ ಹಿಂಸಾಚಾರಕ್ಕೂ ಇಳಿದಿವೆ. ಇದರ ಬೆನ್ನಲ್ಲೇ ಇದೀಗ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ನೂಪುರ್​ ಶರ್ಮಾ ಅವರನ್ನು ಕೊಲೆ ಮಾಡುವುದಕ್ಕಾಗಿ ಪಾಕಿಸ್ತಾನದ ಪ್ರಜೆಯೊಬ್ಬ ಗಡಿ ದಾಟಿ ಭಾರತಕ್ಕೆ ನುಸುಳಿದ್ದು ಅವನನ್ನು ಬಂಧಿಸಲಾಗಿದೆ. ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿಯ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ವಿಷಯ ಬಹಿರಂಗಗೊಂಡಿದೆ. ಶ್ರೀಗಂಗಾನಗರ ಜಿಲ್ಲೆಗೆ ಹೊಂದಿಕೊಂಡಿರುವ ಹಿಂದೂಮಲ್ಕೋಟ್ ಗಡಿಯ ಸಮೀಪ ಈತ ಸುತ್ತಾಡುತ್ತಿದ್ದ. ಈ ವೇಳೆ ಬಿಎಸ್‌ಎಫ್‌ ಯೋಧರು ಹಿಡಿದು ವಿಚಾರಿಸಿದಾಗ ಮೊದಲಿಗೆ ಏನೂ ಹೇಳದ ಆತ ಕೊನೆಗೆ ಬಾಯಿ ಬಿಟ್ಟಿದ್ದಾನೆ. ಈತನ ಬಳಿ ಇದ್ದ ಸುಮಾರು 11 ಇಂಚಿನ ಹರಿತವಾದ ಚಾಕು ಕಂಡು ಅನುಮಾನ ಬಂದು ವಿಚಾರಿಸಿದಾಗ ನೂಪುರ್​ ಶರ್ಮಾ ಅವರ ಹತ್ಯೆಯ ವಿಚಾರವನ್ನು ಹೇಳಿದ್ದಾನೆ ಈತ.

ಚಾಕು ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ. ಈತ ತನ್ನ ಹೆಸರನ್ನು ರಿಜ್ವಾನ್ ಅಶ್ರಫ್ ಎಂದು ಹೇಳಿದ್ದಾನೆ. ತಾನು ಉತ್ತರ ಪಾಕಿಸ್ತಾನದ ಮಂಡಿ ಬಹೌದ್ದೀನ್ ನಗರದ ನಿವಾಸಿ ಎಂದು ಹೇಳಿದ್ದಾನೆ. ನೂಪುರ್​ ಅವರ ಹೇಳಿಕೆಯಿಂದ ನನಗೆ ತೀವ್ರ ಕೋಪ ಬಂದಿದೆ. ಆದ್ದರಿಂದ ಅವರನ್ನು ಕೊಲ್ಲಲು ಗಡಿ ದಾಟಿ ಬಂದಿದ್ದೇನೆ. ಮೊದಲು ದರ್ಗಾದಲ್ಲಿ ಚಾದರ್​ ಅರ್ಪಿಸುವ ಯೋಚನೆ ಇತ್ತು (ತಮ್ಮ ಮನಸ್ಸಿನ ಇಚ್ಛೆ ಪೂರೈಸುವಂತೆ ಅಲ್ಹಾನಲ್ಲಿ ಬೇಡಿಕೊಂಡು ಚಾದರ ಅರ್ಪಿಸುವುದು).ಇದಾದ ಬಳಿಕ ನೂಪುರ್ ಅವರನ್ನು ಕೊಲ್ಲಲು ಪ್ಲ್ಯಾನ್ ಮಾಡಿಕೊಂಡಿದ್ದೆ ಎಂದಿದ್ದಾನೆ ಈತ.

ನೂಪುರ್ ಶರ್ಮಾ ಹೇಳಿಕೆಯ ನಂತರ ಪಾಕಿಸ್ತಾನದಲ್ಲಿ ಧರ್ಮಗುರುಗಳ ಸಭೆ ನಡೆಸಲಾಗಿತ್ತು. ಅದರಲ್ಲಿ ತಾನು ಭಾಗಿಯಾಗಿದ್ದೆ. ನಂತರ ನೂಪುರ್ ಶರ್ಮಾ ಅವರನ್ನು ಕೊಲ್ಲುವ ಉದ್ದೇಶವನ್ನು ಹೊಂದಿದ್ದೆ ಎಂದು ಬಾಯಿ ಬಿಟ್ಟಿದ್ದಾನೆ. (ಏಜೆನ್ಸೀಸ್​)