ನ್ಯೂಸ್

ವಿದೇಶಗಳಿಗೆ ಹೋಗಲು ಬಯಸುವವರಿಗೆ ಇಲ್ಲಿದೆ ಒಂದು ಬೇಸರದ ಸಂಗತಿ

suchetana

ನವದೆಹಲಿ: ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಐದು ತಿಂಗಳಿನಿಂದ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಕರೊನಾ ಸದ್ಯ ನಿಲ್ಲುವ ಮುನ್ಸೂಚನೆ ತೋರದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ಸೆಪ್ಟೆಂಬರ್‌ 30ರವರೆಗೆ ಮುಂದೂಡಲಾಗಿದೆ.

ಆದರೆ ಈ ನಿರ್ಬಂಧ ಕಾರ್ಗೋ ವಿಮಾನ ಸೇವೆಗೆ ಅನ್ವಯವಾಗುವುದಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಹೇಳಿದೆ.

ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ ಎಂದು ನಿರ್ದೇಶನಾಲಯ ಇಂದು ಅಧಿಸೂಚನೆ ಹೊರಡಿಸಿದೆ. ಈ ಆದೇಶ ಸರಕು ವಿಮಾನಗಳು ಮತ್ತು ವಿಶೇಷ ಅನುಮತಿ ಪಡೆದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅಲ್ಲದೆ ಆಯ್ದ ಮಾರ್ಗಗಳಲ್ಲಿ ನಿಯಮಿತವಾಗಿ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಸಂಬಂಧಿತ ಆಡಳಿತಗಳು ಅನುಮತಿಸಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜತೆಗೆ, ವಂದೇ ಭಾರತ್ ಮಿಷನ್ ಅಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ. ಈ ವಿಮಾನಗಳ ಹಾರಾಟಕ್ಕೆ ಅನುಮತಿ ಇದೆ.

ಮಾರ್ಚ್ 25ರಂದು ಕರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದರು. ಆಗ ಎಲ್ಲ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು.

ಮೇ 25ರಿಂದ ದೇಶಿಯ ವಿಮಾನ ಹಾರಾಟ ಆರಂಭವಾಗಿದೆ. ಆದರೆ ಅಂತರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧ ಮುಂದುವರೆಸಲಾಗಿದೆ.