ನ್ಯೂಸ್

ಮಾನವಸಹಿತ ಚಂದ್ರಯಾನಕ್ಕೆ ಮಹಿಳೆಯರ ಲಗ್ಗೆ! ಏಕೈಕ ಭಾರತೀಯ ಕುವರನೂ ಆಯ್ಕೆ

ವಾಷಿಂಗ್ಟನ್​: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2024ರಲ್ಲಿ ಹಮ್ಮಿಕೊಂಡಿರುವ ಮಾನವಸಹಿತ ಚಂದ್ರಯಾನ ಯೋಜನೆಯಲ್ಲಿ, ಎರಡು ಅತಿ ಹೆಮ್ಮೆ ಪಡುವ ವಿಷಯಗಳು ಸೇರಿವೆ. ಅವುಗಳ ಪೈಕಿ ಮೊದಲನೆಯದ್ದು ಎಂದರೆ, ಚಂದ್ರಯಾನಕ್ಕೆ ಆಯ್ಕೆಯಾಗಿರುವ 18 ಮಂದಿಯಲ್ಲಿ 9 ಮಂದಿ ಮಹಿಳೆಯರೇ ಎನ್ನುವುದು!

'ಆರ್ಟೆಮಿಸ್‌ ಮೂನ್‌ ಲ್ಯಾಂಡಿಂಗ್‌ ಪ್ರೋಗ್ರಾಂ’ಗಾಗಿ 18 ಮಂದಿಯೂ ತರಬೇತಿ ಪಡೆಯಲಿದ್ದಾರೆ. ಅವರ ಪೈಕಿ 9 ಮಂದಿ ಮಹಿಳೆಯರು.

ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ದಾಪುಗಲು ಇಡುತ್ತಿರುವ ಈ ಸಂದರ್ಭದಲ್ಲಿ ಮಾನವಸಹಿತ ಚಂದ್ರಯಾನಕ್ಕೆ ಮಹಿಳೆಯರು ಈ ಪರಿಯಲ್ಲಿ ಉತ್ಸುಕತೆ ತೋರಿರುವುದು ಸಂಶೋಧಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣ, ಇದೊಂದು ಅತ್ಯಂತ ಅಪಾಯಕಾರಿ ಯಾತ್ರೆಯಾಗಿದ್ದರೂ ಮಹಿಳೆಯರು ಹಿಂದೆ ಬಿದ್ದಿಲ್ಲ. ಮಾತ್ರವಲ್ಲದೇ ಮೊದಲಿಗೆ ಮಹಿಳೆಯನ್ನೇ ಚಂದ್ರನ ಮೇಲೆ ಪದಾರ್ಪಣೆ ಮಾಡಿಸಿ ನಂತರ ಪುರುಷರನ್ನು ಕಳುಹಿಸುವುದಾಗಿ ನಾಸಾ ಘೋಷಿಸಿದೆ.

ನಾಲ್ಕು ಗಂಡು ಒಂದು ಹೆಣ್ಣು ಇಲಿಗಳನ್ನು ಕಳೆದ ಬಾರಿ ಕಳುಹಿಸಲಾಗಿತ್ತು. ಅದರೆ ಅದು ಅಂದುಕೊಂಡಷ್ಟು ಯಶಸ್ವಿಯಾಗಿರಲಿಲ್ಲ. ಇದೀಗ ಮನುಷ್ಯರು ಹೋಗುತ್ತಿರುವುದು ಇತಿಹಾಸ ಬರೆಯಲಿದೆ.

ಇನ್ನೊಂದು ಭಾರತೀಯರು ಹೆಮ್ಮೆ ಪಡುವ ವಿಷಯವೆಂದರೆ, ಈ 18 ಮಂದಿ ಆಯ್ಕೆಯಾದವರ ಪೈಕಿ ಓರ್ವ ಭಾರತೀಯ ಮೂಲಕ ಯುಕನಿರುವುದು. ಅಮೆರಿಕದಲ್ಲಿ ಸದ್ಯ ನೆಲೆಸಿರುವ ಭಾರತೀಯ ಮೂಲದ ಗಗನಯಾತ್ರಿ ರಾಜಾ ಜಾನ್ ವರ್ಪುತೂರ್ ಚಾರಿ ಅವರು ಆಯ್ಕೆಯಾಗಿದ್ದಾರೆ.

ಇವರು ಹೈದರಾಬಾದ್ ಮೂಲದವರು. ಇವರ ತಂದೆ ಅಮೆರಿಕಕ್ಕೆ ವಲಸೆ ಹೋಗಿದ್ದರು. ರಾಜಾ ಚಾರಿ ಅಮೆರಿಕದ ವಾಯುಸೇನೆಗೆ ಸೇರ್ಪಡೆಗೊಂಡು ಬಳಿಕ 2017ರಲ್ಲಿ ನಾಸಾ ತರಬೇತಿ ಪೂರ್ಣಗೊಳಿಸಿದ 11 ಗಗನಯಾತ್ರಿ ಪದವಿಧರರಾಗಿದ್ದಾರೆ.

ಸದ್ಯ ಇವರು ಅಮೆರಿಕದ ವಾಯುಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುಎಸ್ ಏರ್ ಫೋರ್ಸ್ ಅಕಾಡೆಮಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮತ್ತು ಯುಎಸ್ ನೇವಲ್ ಟೆಸ್ಟ್ ಪೈಲಟ್ ಶಾಲೆಯ ಪದವೀಧರರಾದ 43 ವರ್ಷದ ರಾಜಾ ಚಾರಿ

ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ-ಅಮೇರಿಕನ್. ಈಗ ಆಯ್ಕೆಯಾಗಿರುವ 18 ಮಂದಿಯ ಪೈಕಿ ಬಹುತೇಕ ಮಂದಿ 30-40ರ ವಯೋಮಾನದವರು ಎಂದು ನಾಸಾ ಹೇಳಿದೆ.