ಭೋಪಾಲ್: ಪರಿಶುದ್ಧತೆಯ ಹೆಸರಿನಲ್ಲಿ ಈಗ ನಮಗೆ ಸಿಗುತ್ತಿರುವ ಬಹುತೇಕ ಪದಾರ್ಥಗಳು ಕಲಬೆರಕೆಯವೇ. ಅದರಲ್ಲಿಯೂ ಅಡುಗೆಗೆ ಅತ್ಯವಶ್ಯಕವಾಗಿ ಬೇಕಾದಂಥ ಎಣ್ಣೆ, ತುಪ್ಪಗಳಂತೂ ಜೀವಕ್ಕೆ ಅಪಾಯ ತಂದೊಡ್ಡುವ ರೀತಿಯಲ್ಲಿ ಕಲಬೆರಕೆ ಆಗುತ್ತಿವೆ.
ಇತ್ತೀಚೆಗೆ ಜೇನುತುಪ್ಪದ ಕರಾಳಮುಖ ಬಯಲಿಗೆ ಬಂದಿತ್ತು. ಇದಾಗಲೇ ಹಲವಾರು ಕಡೆಗಳಲ್ಲಿ ಕಲಬೆರೆಕೆ ಎಣ್ಣೆ, ತುಪ್ಪಗಳ ಬಂಡವಾಳವೂ ಹೊರಕ್ಕೆ ಬಂದಿದೆ. ಆದರೆ ತುಪ್ಪದ ಪರಿಮಳ, ಅದರ ಬಣ್ಣ, ಅಂದಚೆಂದದ ಪ್ಯಾಕಿಂಗ್, ಜಾಹೀರಾತುಗಳಿಗೆ ಮೊರೆ ಹೋಗಿ ಪರಿಶುದ್ಧ ಎಂದು ಕೊಳ್ಳುವವರೇ ಹೆಚ್ಚು.
ಆದರೆ ಭೋಪಾಲ್ನ ತುಪ್ಪ ತಯಾರಿಕಾ ಘಟಕದಲ್ಲಿ ತಯಾರಾಗುತ್ತಿರುವ ಕಲಬೆರಕೆ ಕುರಿತು ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದರಿಂದ ಅದರ ಮೇಲೆ ದಾಳಿ ಮಾಡಿದಾಗ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಹೊರಗಡೆಯಿಂದ ಘಮಘಮಿಸುವ ಪರಿಮಳ ಎಂದು ಒಳಕ್ಕೆ ಹೋದರೆ ಅಲ್ಲಿ ಆಗುತ್ತಿದ್ದುದೇ ಬೇರೆ.
ಹೋಟೆಲ್ ಇತ್ಯಾದಿಗಳಿಂದ ಕರಿದು ಮಿಕ್ಕಿದ ಎಣ್ಣೆಗಳನ್ನು ತಂದು ಅದಕ್ಕೆ ಜೀವಕ್ಕೆ ಅತ್ಯಂತ ಅಪಾಯ ಎಂದೇ ಹೇಳಲಾಗುವ ಡಾಲ್ಡಾ ಮಿಕ್ಸ್ ಮಾಡಿ, ಅದಕ್ಕೊಂದಿಷ್ಟು ಘಮಘಮಿಸುವ ತುಪ್ಪದ ರುಚಿಯಂಥ ಎಸೆನ್ಸ್ ಮಿಕ್ಸ್ ಮಾಡಿ ಅದನ್ನು ಪರಿಶುದ್ಧ, ಘಮಘಮಿಸುವ ತುಪ್ಪದ ಹೆಸರಿನಲ್ಲಿ 500-600 ರೂಪಾಯಿಗಳಿಗೆ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ. ಇದು ವಿಷಕಾರಕ ಎಂದು ತಿಳಿದುಬಂದಿದೆ. ನಂದಿ ಬ್ರ್ಯಾಂಡ್ ಹೆಸರಿನಲ್ಲಿ ಈ ತುಪ್ಪದ ಮಾರಾಟ ದೇಶಾದ್ಯಂತ ನಡೆಯುತ್ತಿದೆ.
ಎಲ್ಲವೂ ಸೇರಿ ಲೀಟರ್ಗೆ ಅತ್ಯಂತ ಕಡಿಮೆ ಅಂದರೆ 50-60 ರೂಪಾಯಿಗಳಲ್ಲಿ ಇಂಥ ಕಲಬೆರಕೆ ಕೆಲಸ ಮಾಡಿ, 500-600 ರೂಪಾಯಿಗೆ ಮಾರಾಟ ಮಾಡುವುದೂ ಅಲ್ಲದೇ, ಜನರ ಜೀವದ ಜತೆ ಚೆಲ್ಲಾಟವಾಡುವ ಈ ಘಟಕದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ಬಾಡಿಗೆ ಕೋಣೆಗಳಲ್ಲಿ ದಿನಕ್ಕೆ 40 ರಿಂದ 50 ಕೆಜಿ ತುಪ್ಪ ಇಲ್ಲಿ ತಯಾರು ಮಾಡಲಾಗುತ್ತದೆ. ಪ್ಯಾಕಿಂಗ್ ಕೂಡ ಇಲ್ಲೇ ಮಾಡಿ ಅಂಗಡಿಗಳಿಗೆ ನೀಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಾ ಮೂಲದ 36 ವರ್ಷದ ನಕಲಿ ತುಪ್ಪದ ಮಾಲೀಕ ವಿಜಯ್ ಗುಪ್ತಾನನ್ನು ಪೊಲೀಸರು ಬಂಧಿಸಿದ್ದಾರೆ. ಸಂಜೀವಿನಗರದಲ್ಲಿ 2003ರಿಂದಲೂ ಈ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಇದಾಗಲೇ ಸಹಸ್ರಾರು ಕೆ.ಜಿ. ನಕಲಿ ತುಪ್ಪ ಜನರ ಹೊಟ್ಟೆ ಸೇರಿದೆ.
ಸದ್ಯ ವಿಜಯ್ ಗುಪ್ತಾನಿಂದ ಅನೇಕ ನಕಲಿ ಸಾಮಗ್ರಿ, ಎಣ್ಣೆ, ಡಾಲ್ಡಾ ವಶಪಡಿಸಿಕೊಳ್ಳಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ವರ್ಷಕ್ಕೆ ಏನಿಲ್ಲವೆಂದರೂ, ಕೆಲಸಗಾರರ ಖರ್ಚು, ಬಾಡಿಗೆ ಎಲ್ಲವನ್ನೂ ಹೊರತುಪಡಿಸಿ, 30 ಲಕ್ಷ ರೂಪಾಯಿಗೂ ಅಧಿಕ ಆದಾಯವನ್ನು ಈ ನಕಲಿ ತುಪ್ಪದಿಂದ ಗಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.