ಪಟ್ನಾ: ಭ್ರಷ್ಟಾಚಾರದಲ್ಲಿ ಸಿಲುಕಿರುವವರ ಒಂದೊಂದೇ ಹಗರಣಗಳನ್ನು ಜಾರಿ ನಿರ್ದೇಶನಾಲಯವು ಬಯಲಿಗೆ ತರುತ್ತಿರುವ ನಡುವೆಯೇ, ಕೇಂದ್ರ ಸರ್ಕಾರದ ವಿರುದ್ಧ ಬಿಹಾರದ ನೂತನ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ ಯಾದವ್ ಕಿಡಿ ಕಾರಿದ್ದಾರೆ.
ತಾವು ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ತಮ್ಮ ಮೇಲೂ ದಾಳಿ ನಡೆಸಬಹುದು ಎನ್ನುವ ಕಾರಣಕ್ಕೆ ಸರ್ಕಾರಕ್ಕೆ ಟಾಂಗ್ ನೀಡಿದ ತೇಜಸ್ವಿ, ನಾನು ಇಡಿಯಾಗಲಿ, ಸಿಬಿಐಗೆ ಆಗಲಿ ಹೆದರುವ ಮಾತೇ ಇಲ್ಲ. ಅವರು ತನಿಖೆಗೆ ಬಂದರೆ ಧಾರಾಳವಾಗಿ ಬರಬಹುದು. ನಾನ್ಯಾಕೆ ಹೆದರಲಿ? ಅವ್ರೇನಾದರೂ ಬಂದರೆ ಉಳಿದುಕೊಳ್ಳಲು ನಮ್ಮ ಮನೆಯಲ್ಲಿಯೇ ವ್ಯವಸ್ಥೆ ಮಾಡಿಕೊಡುವೆ ಎಂದಿದ್ದಾರೆ.
ನಮ್ಮ ಮೇಲೆ ದಾಳಿ ಮಾಡುವುದಿದ್ದರೆ ಮಾಡಲಿ, ಅವರ ಮನಸ್ಸಿಗೆ ಶಾಂತಿ ಸಿಗುವ ಹಾಗಿದ್ದರೆ ಅವೆರಡೂ ಸಂಸ್ಥೆಗಳಿಗೆ ತನ್ನ ಮನೆಯಲ್ಲಿಯೇ ಕಚೇರಿ ಮಾಡಿಕೊಳ್ಳಲು ಜಾಗ ನೀಡುತ್ತೇನೆ. ಇಷ್ಟು ಮಾಡದಿದ್ದರೂ ಶಾಂತಿ ಸಿಗದಿದ್ದರೆ ನಾನೇನೂ ಮಾಡಲಾರೆ ಎಂದ ತೇಜಸ್ವಿ, ಈ ಹಿಂದೆಯೂ ಬಿಹಾರ ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ತನಿಖಾ ಸಂಸ್ಥೆಗಳಿಗೆ ಎಂದು ಹೆದರಿಲ್ಲ ಎಂದರು.
2015 ರಿಂದ 2017 ರ ಅವಧಿಯಲ್ಲಿ ಬಿಹಾರ ಉಪಮುಖ್ಯಮಂತ್ರಿಯಾಗಿದ್ದೆ. ಆಗಲೂ ನಾನು ಯಾರಿಗೂ ಹೆದರಲಿಲ್ಲ. ತಂದೆಯವರ (ಲಾಲೂ ಪ್ರಸಾದ್ ಯಾದವ್) ಅನುಪಸ್ಥಿತಿಯಲ್ಲಿ ಪ್ರತಿಪಕ್ಷದ ನಾಯಕನಾಗಿ ಮತ್ತು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ ಅನುಭವ ನನಗಿದೆ ಎಂದರು.
ಅಕ್ರಮ ಹಣ ವರ್ಗಾವಣೆ ಪ್ರಕರಣ ಸೇರಿದಂತೆ ತೇಜಸ್ವಿ ಅವರ ವಿರುದ್ಧ ಕೆಲವೊಂದು ಕೇಸ್ಗಳು ಇರುವ ವಿಚಾರದ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ತೇಜಸ್ವಿ ಯಾದವ್, ಅವೆಲ್ಲವೂ ನಾನು ತುಂಬಾ ಚಿಕ್ಕವನಿದ್ದಾಗಿನ ಕೇಸ್ಗಳು. ನನ್ನ ಕ್ರಿಕೆಟ್ ಜೀವನದ ಸಮಯದಲ್ಲಿ ದಾಖಲಾದ್ದವು. ಒಂದು ವೇಳೆ ನಾನು ಅಪರಾಧಿಯೇ ಆಗಿದ್ದರೆ ಆಗಲೇ ಕ್ರಮ ತೆಗೆದುಕೊಳ್ಳಬಹುದಿತ್ತಲ್ಲ ಎಂದರು. (ಏಜೆನ್ಸೀಸ್)